ಚಿಕ್ಕೋಡಿ: ಕೊಳವೆ ಬಾವಿಗೆ ಜಿಗಿದು ರೈತ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಸುಲ್ತಾನಪುರ ಗ್ರಾಮದ ಲಕ್ಕಪ್ಪ ಸಂಗಪ್ಪ ದೊಡ್ಡಮನಿ (38) ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿದ ರೈತ.
ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ನೇತೃತ್ವದಲ್ಲಿ ಅಗ್ನಿಶಾಮಕ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ಸತತ ಎರಡ್ಮೂರು ಗಂಟೆಗಳ ಕಾಲ ಶವ ಹೊರತೆಗೆಯಲು ಕಾರ್ಯಾಚರಣೆ ನಡೆಸಿದರು. ಜೆಸಿಬಿ ಮೂಲಕ ಕೊಳವೆಬಾವಿ ಪಕ್ಕ ಅಂದಾಜು 18 ರಿಂದ 20 ಅಡಿ ಆಳ ಭೂಮಿ ಅಗೆದು ಶವವನ್ನು ಹೊರ ತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರಾಯಬಾಗ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಕಳೆದ ವಾರ ತನ್ನ ಜಮೀನಿನಲ್ಲಿ ಬೋರ್‌ವೆಲ್ ಕೊರೆಯಿಸಿದ್ದ ಲಕ್ಕಪ್ಪ, ಕಡಿಮೆ ನೀರು ಬಂದಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.