ಬೆಂಗಳೂರು: ಕೇಂದ್ರ ಸರ್ಕಾರದ ಎದುರು ರಾಜ್ಯದ ಸಮಸ್ಯೆ ವ್ಯಕ್ತಪಡಿಸಲಾಗದ ಸಿಎಂ ಬಿ.ಎಸ್.ಯಡಿಯೂರಪ್ಪ ಅಸಹಾಯಕರಾಗಿದ್ದಾರೆ. ಇವರಿಗೆ ರಾಜ್ಯದ ಬಿಜೆಪಿ ಸಂಸದರಿಂದಲೇ ಸಹಕಾರ ಸಿಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರದಿಂದ ಸೂಕ್ತ ನೆರವು ಸಿಗದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಹಾಯಕರಾಗಿದ್ದಾರೆ. ಜಿಎಸ್ಟಿ ಪಾಲು, ನೆರೆ ಪರಿಹಾರ ಮುಂತಾದ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ನೆರವು ಸಿಗುತ್ತಿಲ್ಲ. ರಾಜ್ಯದ 25 ಬಿಜೆಪಿ ಸಂಸದರು ಮೋದಿ ಎದುರು ಮಾತನಾಡುತ್ತಿಲ್ಲ. ಸಿಎಂಗೆ ಸಹಕಾರ ನೀಡದೆ ರಾಜ್ಯಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದಿಲ್ಲಿಗೆ ತೆರಳಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಸಮಾಲೋಚಿಸುತ್ತಿದ್ದು, ರಾಜ್ಯದ ಯಾವುದೇ ಸಂಸದರು ಇವರಿಗೆ ಸಹಕಾರ ನೀಡುತ್ತಿಲ್ಲ. ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಈ ಸಂದರ್ಭದಲ್ಲಿ ಇವರ ಬೆಂಬಲ ಸಿಗಬೇಕು. ಆದರೆ ಅವರು ಬೆಂಬಲ ನೀಡುತ್ತಿಲ್ಲ ಎಂದು ನಿನ್ನೆ ಕೂಡ ಡಿ.ಕೆ.ಶಿವಕುಮಾರ್ ಗಂಭೀರವಾಗಿ ಆರೋಪ ಮಾಡಿದ್ದರು.
ಪ್ರಧಾನಮಂತ್ರಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾದ ಸಂದರ್ಭ ಯಾವುದೇ ಸಂಸದರು ಸಿಎಂಗೆ ಜೊತೆಯಾಗಿ ಬಂದಿಲ್ಲ. ರಾಜ್ಯದ ಪರವಾಗಿ ಧ್ವನಿ ಎತ್ತುವ ಕಾರ್ಯವನ್ನು ಯಾವ ಸಂಸದರೂ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.