ದೇವನಹಳ್ಳಿ: ಮೂರ್ನಾಲ್ಕು ದಿನಗಳ ಒಳಗಾಗಿ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸ್ವಿಟ್ಜರ್ಲ್ಯಾಂಡ್ ನ ದಾವೋಸ್ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದರು. ಮೂರ್ನಾಲ್ಕು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುತ್ತೇವೆ. ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರ ಜೊತೆ ಮಾತನಾಡಿ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿದರು.
ಈಗಾಗಲೇ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಈ ಹಿಂದೆಯೇ ಮಾತುಕತೆ ನಡೆಸಲಾಗಿದೆ. ಆದರೆ ನಾಳೆಯೂ ಅಮಿತ್ ಶಾ ಅವರ ಜೊತೆ ಮಾತನಾಡಲು ಸಮಯ ಸಿಕ್ಕಿದ್ದು, ಪ್ರಮಾಣವಚನ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಮಾಡುವುದಾಗಿ ಸಿಎಂ ಹೇಳಿದರು.
ಇನ್ನು, ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆಗೆ ಕಂಪನಿಗಳು ಬಹಳ ಆಸಕ್ತಿ ಹೊಂದಿವೆ. ದಾವೋಸ್ ಪ್ರವಾಸ ಸಾಕಷ್ಟು ಲಾಭ ತಂದಿದೆ ಎಂದರು. ಹೊರಡುವ ಮುನ್ನ 10 ದಿನ ಬೆಂಗಳೂರಿನಿಂದ ಹೊರ ಹೊಗಬೇಕು. ಇದರಿಂದ ಪ್ರಯೋಜನವೇನು ಎಂಬ ಯೋಚನೆ ಬಂದಿತ್ತು. ದಾವೋಸ್ಗೆ ಹೋದ ಮೇಲೆ ಆತಂಕವೆಲ್ಲ ದೂರವಾಯಿತು. ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಜಿಫ್ ಸೆಕ್ರೆಟರಿ ಜೊತೆ ನಾನು 40 ಕ್ಕೂ ಹೆಚ್ಚು ಕಂಪನಿಗಳ ಜೊತೆ ವೈಯಕ್ತಿಕವಾಗಿ ಮಾತುಕತೆ ನಡೆಸಿದ್ದೇವೆ. ಬೆಂಗಳೂರು ಮತ್ತು ಕರ್ನಾಟಕದ ಬಗ್ಗೆ ವಿಶೇಷವಾದ ಚರ್ಚೆಯಾಗುತ್ತಿತ್ತು ಎಂದು ಸಿಎಂ ಮಾಹಿತಿ ನೀಡಿದರು.