ಬೆಂಗಳೂರು: ಚಿಕ್ಕಪೇಟೆ ವಾರ್ಡ್ನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಲ್ಲಿ ಪಾಸಿಟಿವ್ ಕೇಸ್ ಕಂಡು ಬಂದರೂ ಸಹ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಇಂದು ಬೆಳಗ್ಗೆ ಮಲ್ಲಿಕಾರ್ಜುನ ಟೆಂಪಲ್ ರಸ್ತೆ ಬಳಿ ಕೋವಿಡ್ಗೆ 45 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಪೊಲೀಸ್ ರಸ್ತೆಯಲ್ಲೂ ಸಹ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ಮನೆಯ ಐವರಿಗೆ ಕೊರೊನಾ ಸೋಂಕು ಹರಡಿದೆ. ಜೊತೆಗೆ ಎಂಟು ಕಾಂಪ್ಲೆಕ್ಸ್ಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಇಪ್ಪತ್ತು ಪಾಸಿಟಿವ್ ಕೇಸ್ಗಳು ಕಂಡು ಬಂದಿವೆ.
ಕಳೆದ ಶುಕ್ರವಾರದಿಂದ ಪಾಸಿಟಿವ್ ಬಂದರೂ ಸಹ ನಾಲ್ಕು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಲ್ಲ. ಹದಿನೈದು ಜನ ಇರುವ ಮನೆಯೊಂದರಲ್ಲಿ ಒಬ್ಬರಿಗೆ ಕೋವಿಡ್ ಕಂಡು ಬಂದಿದೆ. ಆದ್ರೆ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಎಂಬ ಸಬೂಬು ಕೊಟ್ಟು ರೋಗಿಯನ್ನು ಇನ್ನೂ ಕೂಡ ಆಸ್ಪತ್ರೆಗೆ ರವಾನೆ ಮಾಡಿಲ್ಲ ಎಂದು ಕಾರ್ಪೋರೇಟರ್ ಲೀಲಾ ಶಿವಕುಮಾರ್ ಅವರ ಪತಿ ಶಿವಕುಮಾರ್ ದೂರಿದ್ದಾರೆ.
ಸೋಂಕಿತ ವ್ಯಕ್ತಿಯನ್ನು ಮನೆಯ ಒಂದು ಕೋಣೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಒಬ್ಬ ಡಾಕ್ಟರ್ ಕೂಡ ಭೇಟಿ ನೀಡಿಲ್ಲ. ಆಯುಕ್ತರು ಫೋನ್ ಕರೆ ರಿಸೀವ್ ಮಾಡುತ್ತಿಲ್ಲ. ಸ್ಥಳೀಯ ಆರೋಗ್ಯಧಿಕಾರಿ ಡಾ. ನಂದಾ ಕೂಡ ಏನೂ ಮಾಡುತ್ತಿಲ್ಲ. 80 ಜನ ಪ್ರಾಥಮಿಕ ಸಂಪರ್ಕಿತರನ್ನು ಹೋಟೆಲ್ ಕ್ವಾರಂಟೈನ್ಗೆ ಕಳಿಸಿಲ್ಲ. ದ್ವಿತೀಯ ಸಂಪರ್ಕಿತರನ್ನು ಟ್ರೇಸ್ ಮಾಡುತ್ತಿಲ್ಲ ಎಂದು ಶಿವಕುಮಾರ್ ಆರೋಪಿಸಿದರು.
ಕಿಲಾರಿ ರಸ್ತೆ, ಎಂಎಸ್ ಲೇನ್, ಮಲ್ಲಿಕಾರ್ಜುನ ಟೆಂಪಲ್ ರಸ್ತೆ, ಒಟಿಸಿ ರಸ್ತೆ, ಚಿಕ್ಕಪೇಟೆ ಪ್ಲಾಜಾ, ರಿಷಬ್ ಪ್ಲಾಸಾ, ಎನ್ಕೆಎಸ್ ಪ್ಲಾಜಾಗಳಲ್ಲಿ ಕೊರೊನಾ ವೇಗವಾಗಿ ಹಬ್ಬುತ್ತಿದ್ದು, ಇಲ್ಲಿ ವ್ಯಾಪಾರ ವಹಿವಾಟು ಹೆಚ್ಚು ನಡೆಯುತ್ತಿರುವುದರಿಂದ ಹೊರಗಿನ ಜನರು ಓಡಾಟ ನಡೆಸುತ್ತಿದ್ದಾರೆ. ಒಂದೊಂದು ಕಟ್ಟಡದಲ್ಲಿ 22-25 ಜನ ವಾಸವಿದ್ದಾರೆ. ಶೀಘ್ರವಾಗಿ ಸೀಲ್ ಡೌನ್ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.