ಬೆಂಗಳೂರು: ನಾಳೆ 74ನೇ ಸ್ವಾತಂತ್ರ್ಯ ದಿನಾಚರಣೆ. ಕಿಡಿಗೇಡಿಗಳು ಈ ವೇಳೆ ಯಾವುದೇ ರೀತಿಯ ದುಷ್ಕೃತ್ಯ ನಡೆಸಬಾರದು ಎನ್ನುವ ಉದ್ದೇಶದಿಂದ ನಗರದಲ್ಲಿ ಪೊಲೀಸರು ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ.
ಪಶ್ಚಿಮ ವಿಭಾಗ ಹಾಗೂ ಪೂರ್ವ ವಿಭಾಗ ವ್ಯಾಪ್ತಿಯಲ್ಲಿ ಆರ್‌ಎಎಫ್ ಹಾಗೂ ಕೆಎಸ್‌ಆರ್‌ಪಿ ಪೊಲೀಸರು ನಗರದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಪಥ ಸಂಚಲನ ನಡೆಸಿದರು.
ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ನಗರದಲ್ಲಿರುವ ಕಿಡಿಗೇಡಿಗಳಿಗೆ ಭಯ ಹುಟ್ಟಿಸಲು ಲಾಠಿ, ಗನ್ ಹಿಡಿದು ಪೊಲೀಸರು ಗಲ್ಲಿ ಗಲ್ಲಿ ತಿರುಗಾಡಿದ್ದಾರೆ. ಈ ವೇಳೆ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.
ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿದೆ. ಈ ವೇಳೆ ಗಣ್ಯರು ಭಾಗಿಯಾಗಲಿದ್ದಾರೆ. ಸದ್ಯ ನಗರದಲ್ಲಿ 144 ಸೆಕ್ಷನ್ ಜಾರಿ ಇದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆಯೂ ಖಾಕಿ ಕಣ್ಗಾವಲು ಕಾಣುತ್ತಿದೆ.