ವಿಜಯಪುರ: ಬಿಸಿಲುನಾಡು ವಿಜಯಪುರ ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯಗಳು ಸರ್ವೇಸಾಮಾನ್ಯ. ಅತಿವೃಷ್ಟಿ-ಅನಾವೃಷ್ಟಿಯಿಂದ ಅನ್ನದಾತ ಪ್ರತಿ ಬಾರಿ ನಷ್ಟ ಅನುಭವಿಸಿ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಬೆಳೆ ನಷ್ಟದಿಂದ ಸಮಯಕ್ಕೆ ಸರಿಯಾಗಿ ಸಾಲ ತೀರಿಸಲಾಗದೆ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಾಲ ನೀಡುವ ಬ್ಯಾಂಕ್ಗಳ ದಬ್ಬಾಳಿಕೆಗೆ ಅನ್ನದಾತ ರೋಸಿ ಹೋಗಿದ್ದಾನೆ.
ಜಿಲ್ಲೆ ಒಟ್ಟು 7 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿ ಭೂಮಿ ಹೊಂದಿದೆ. ಇಲ್ಲಿ ಒಣಬೇಸಾಯದ ಮೇಲೆ ಬಹುತೇಕ ರೈತರು ಅವಲಂಬಿತರಾಗಿದ್ದಾರೆ. ಇತ್ತೀಚೆಗೆ ನೀರಾವರಿ ಯೋಜನೆಗಳು ಜಾರಿಯಾದ ಮೇಲೆ ತೋಟಗಾರಿಕೆ ಬೆಳೆಯನ್ನು ಸಹ ಹೆಚ್ಚಿಸಲಾಗಿದೆ. ರೈತರು ಮುಂಗಾರು, ಹಿಂಗಾರು ವೇಳೆ ಬೀಜ ಬಿತ್ತನೆ ಮಾಡಲು ವಿವಿಧ ಬ್ಯಾಂಕ್ಗಳಿಂದ ತಮ್ಮ ಹೊಲದ ದಾಖಲಾತಿ ನೀಡಿ ಸಾಲ ಪಡೆಯುತ್ತಾರೆ.
ಅದೇ ಬೆಳೆ ನಷ್ಟವಾದರೆ ಬೆಳೆ ಸಾಲ ತೀರಿಸಲಾಗದೆ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಾರೆ. ಇದರಿಂದ ಅದೆಷ್ಟೋ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ. ಹೀಗಾಗಿ ಖಾಸಗಿ ಬ್ಯಾಂಕ್ಗಳು ರೈತರಿಗೆ ಸಾಲ ನೀಡಲು ಹಿಂಜರಿಯುತ್ತಿವೆ. ಇದಕ್ಕಾಗಿ ರೈತರ ಅರ್ಜಿಗಳನ್ನು ಸ್ವೀಕರಿಸಲು ಮೀನಮೇಷ ಎಣಿಸುವ ಕಾರಣ ರೈತರು ಬ್ಯಾಂಕ್ ವಿರುದ್ಧ ಸಹಜವಾಗಿ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕಳೆದ ವರ್ಷ ಕೋವಿಡ್-19 ನಡುವೆ ಜಿಲ್ಲೆಯಲ್ಲಿ ಅತಿವೃಷ್ಟಿ ಅನುಭವಿಸಬೇಕಾಯಿತು. ಪ್ರವಾಹದಿಂದ 1.76 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಷ್ಟ ಅನುಭವಿಸಬೇಕಾಯಿತು. ನಂತರ ಅನಾವೃಷ್ಟಿ ಉಂಟಾಗಿ ಕಳೆದ ವರ್ಷ 28 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲಾಡಳಿತದ ರೈತ ಆತ್ಮಹತ್ಯೆ ಸತ್ಯಾನುಸತ್ಯತೆ ಅಧ್ಯಯನ ನಡೆಸಿದಾಗ 28 ರೈತರ ಪೈಕಿ 17 ರೈತರು ಸಾಲಬಾಧೆಯಿಂದಲೇ ಮೃತಪಟ್ಟಿದ್ದಾರೆಂದು ತಿಳಿದುಬಂದಿತು. ಕಳೆದ ವರ್ಷದ ಅತಿವೃಷ್ಟಿ ಹಾಗೂ ಅನಾವಷ್ಟಿಯ ನಷ್ಟಕ್ಕಾಗಿ ಸರ್ಕಾರ 6 ತಿಂಗಳಿನಲ್ಲಿ 130 ಕೋಟಿ ರೂ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಾವತಿಸಿದೆ.
ಬ್ಯಾಂಕ್ಗಳಿಂದ ಪಡೆದ ಸಾಲಕ್ಕಿಂತ ಲೇವಾದೇವಿ ಮೂಲಕ ಖಾಸಗಿಯಾಗಿ ಪಡೆದ ಸಾಲಕ್ಕೆ ಹೆಚ್ಚು ಬಡ್ಡಿ ಪಾವತಿಸಬೇಕಿರುವ ಕಾರಣ ರೈತ ತೀವ್ರ ಆರ್ಥಿಕ ತೊಂದರೆ ಅನುಭವಿಸುತ್ತಾನೆ. ಬಹುತೇಕ ಖಾಸಗಿ ಬ್ಯಾಂಕ್ಗಳು ಸಾಲ ನೀಡುವ ವೇಳೆ ಬ್ಯಾಂಕ್ ಆಡಳಿತಾತ್ಮಕ ನಿಯಮಾವಳಿಗಳನ್ನು ಪಾಲಿಸದಿರುವುದು ಹಾಗೂ ಕಡ್ಡಾಯವಾಗಿ ಸಾಲ ವಸೂಲಾತಿ ಮಾಡುವ ಕಾರಣ ಅನ್ನದಾತ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಹಾಗಾಗಿ ಬ್ಯಾಂಕ್ಗಳು ಸಾಲ ನೀಡುವ ವೇಳೆ ಆಡಳಿತಾತ್ಮಕ ನಿಯಮಾವಳಿಗಳನ್ನು ಪಾಲಿಸಬೇಕಾಗಿದೆ.