ದಾವಣಗೆರೆ: ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಆರೋಪ ಹೊರಿಸಿ ಮಾಯಕೊಂಡ ಗ್ರಾಮದಲ್ಲಿ ಎಎಸ್ಐ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ.
ಎಎಸ್ಐ ಓಬಳೇಶ್ ಅವರನ್ನು ಥಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಮಾಯಕೊಂಡ ಪೊಲೀಸರು ಬಂಧಿಸಿದ್ದಾರೆ. ಮಾಯಕೊಂಡ ಗ್ರಾಮದ ಬಸವಲಿಂಗಪ್ಪರ ನಿಂಗಪ್ಪ, ತಿಪ್ಪೇಸ್ವಾಮಿ, ಶೇಖರಪ್ಪ, ಹೊನ್ನಾವ್ವರ ರಂಗಪ್ಪ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಿರುವ ಪೊಲೀಸರು ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ.
ಗಣೇಶೋತ್ಸವ ಮೆರವಣಿಗೆ ವೇಳೆ ವಿನಾಃಕಾರಣ ತಮ್ಮ ಮೇಲೆ 40 ಕ್ಕೂ ಹೆಚ್ಚು ಜನರು ಹಲ್ಲೆ ನಡೆಸಿದ್ದಾರೆ ಎಂದು ಎಎಸ್ಐ ಓಬಳೇಶ್ ಅವರು ದೂರು ಕೊಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಂದು ಪೊಲೀಸರು ಮಾಡಿರುವ ವಿಡಿಯೋ ಚಿತ್ರೀಕರಣ ಆಧರಿಸಿ ಹಲ್ಲೆ ನಡೆಸಿದ 15 ಮಂದಿಯನ್ನು ಗುರುತಿಸಲಾಗಿದ್ದು, ಈ ಪೈಕಿ 9 ಮಂದಿ ಸೆರೆಸಿಕ್ಕಿದ್ದಾರೆ. ಕೊಲೆ ಯತ್ನ, ಜಾತಿ ನಿಂದನೆ ಸೆಕ್ಷನ್ ನಡಿ ದೂರು ದಾಖಲಿಸಲಾಗಿದೆ.
ಘಟನೆ ಬಗ್ಗೆ ಎಸ್ಪಿ ಹೇಳೋದೇನು?
ಮಾಯಕೊಂಡ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ನಡೆಯುತಿತ್ತು. ಮಾರ್ಗ ಮಧ್ಯೆ ವಿದ್ಯುತ್ ಕಡಿತಗೊಂಡ ಕಾರಣ ಮೆರವಣಿಗೆ ಸ್ಥಗಿತಗೊಂಡಿತ್ತು. ಈ ವೇಳೆ ಮಾಯಕೊಂಡ ಎಎಸ್ಐ ಓಬಳೇಶ್ ನೀರು ಕುಡಿಯಲು ಮನೆಯೊಂದಕ್ಕೆ ಹೋಗಿದ್ದಾರೆ. ಮನೆಯಲ್ಲಿದ್ದ ಮಹಿಳೆಯ ಪತಿ ಸಂಬಂಧಿಕರು, ಗ್ರಾಮಸ್ಥರು ತಪ್ಪಾಗಿ ಅರ್ಥೈಸಿಕೊಂಡು ಎಎಸ್ಐ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.