ಬೆಂಗಳೂರು : ಕೊರೊನಾ ಎರಡನೇ ಅಲೆ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕೊರೊನಾ ವಾರಿಯರ್ ಸಹಾಯಕ್ಕೆ ಬಂದಿದ್ದಾರೆ. ನಿನ್ನೆಯಷ್ಟೇ ಪೊಲೀಸ್ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿದ್ದರು.
ಕೊರೊನಾ ವಾರಿಯರ್ ಆಗಿ ಪೌರ ಕಾರ್ಮಿಕರು, ಪೊಲೀಸ್ ಇಲಾಖೆ ಸಿಬ್ಬಂದಿ, ವೈದ್ಯರು ಹಾಗೂ ಸ್ಮಶಾನದಲ್ಲಿ ಕೆಲಸ ಮಾಡುವ ಕಾರ್ಮಿಕರು, ಜೀವದ ಹಂಗು ತೊರೆದು ಕೊರೊನಾ ತಡಗೆ ಸೇನಾನಿಗಳಂತೆ ದುಡಿಯುತ್ತಿದ್ದಾರೆ.
ಇಂದು ರಾಗಿಣಿ ದ್ವಿವೇದಿ, ಭಾರತಿ ನಗರ ಸ್ಮಶಾನ ಸಿಬ್ಬಂದಿಗೆ ಆಹಾರ ಸಾಮಾಗ್ರಿ ವಿತರಣೆ ಮಾಡಿದ್ದಾರೆ. ಜಿನೆಕ್ಸ್ಟ್ ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ಕಾಕ್ಸ್‌ಟೌನ್ ಹತ್ತಿರ ಕಲ್ಪಹಳ್ಳಿಯ ಸ್ಮಶಾನದ ಜನರಿಗೆ ಆಹಾರ ಸಾಮಾಗ್ರಿಗಳನ್ನ ವಿತರಿಸಿದ್ದಾರೆ.
ಈ ಸಮಯದಲ್ಲಿ ನಾವು ಕಷ್ಟದಲ್ಲಿರುವವರಿಗೆ ನೆರವಿಗೆ ನಿಲ್ಲಬೇಕಿದೆ. ಅದೇ ಕಾರಣಕ್ಕೆ ನಾವೀಗ ಈ ಕೆಲಸ ಶುರು ಮಾಡಿದ್ದೇವೆ. ವಿಶೇಷವಾಗಿ ಬೆಂಗಳೂರು ನಗರದಲ್ಲಿನ ಸ್ಮಶಾನ ಸಿಬ್ಬಂದಿ ತೀವ್ರ ಸಂಕಷ್ಟದಲ್ಲಿದ್ದಾರೆ.
ಯಾಕೆಂದರೆ, ಕೋವಿಡ್ ಎರಡನೇ ಅಲೆ ಭಯಾನಕ ಪರಿಸ್ಥಿತಿ ನಿರ್ಮಾಣ ಮಾಡಿದೆ. ಸಾವಿನ ಸಂಖ್ಯೆಗಳು ಹೆಚ್ಚುತ್ತಿವೆ. ಇಲ್ಲಿ ಕೆಲಸ ಮಾಡುವಂತಹ ಜನರು ಒತ್ತಡಕ್ಕೆ ಸಿಲುಕಿದ್ದಾರೆ.
ಅವರಿಗೂ ಜೀವ ಭಯ ಇದೆ, ಅದನ್ನು ದೂರ ಮಾಡಿಕೊಂಡು ಅವರು ಸತ್ತವರ ಅಂತ್ಯ ಸಂಸ್ಕಾರ ಮಾಡಬೇಕಿದೆ. ಅವರಿಗೆ ನಾವೀಗ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ಸಾಮಾಜಿಕ ಸೇವಾ ಕಾರ್ಯಕರ್ತ ರವಿ ಎಂಬುವರ ಜತೆಗೂಡಿ ರಾಗಿಣಿ ದ್ವಿವೇದಿ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ.