ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ನಿನ್ನೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ನಡೆದಿರುವ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ 4 ವಿಶೇಷ ತಂಡಗಳನ್ನು ರಚಿಸಲಾಗಿದೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರು ಮಾಹಿತಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಬ್ಯಾಂಕಿನ ವ್ಯವಸ್ಥಾಪಕ ರವಿ ಭೀಮಪ್ಪ ಕೋಟೆಪ್ಪಗೋಳ ಸೆ. 24 ರಂದು ರಾತ್ರಿ ತಮ್ಮ ಬ್ಯಾಂಕ್ ನಲ್ಲಿ ಕಳ್ಳತನವಾಗಿರುವ ಕುರಿತಂತೆ ದೂರು ದಾಖಲಿಸಿದ್ದಾರೆ. ಬ್ಯಾಂಕ್ ನ ಲಾಕರ್ ನಲ್ಲಿದ್ದ 1,24,80,333 ರೂಪಾಯಿ ಮೌಲ್ಯದ 3 ಕೆ.ಜಿ 761 ಗ್ರಾಂ ಚಿನ್ನಾಭರಣಗಳು ಹಾಗೂ 21,75,572 ರೂಪಾಯಿ ನಗದು ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ದೂರು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ 4 ವಿಶೇಷ ತನಿಖಾ ತಂಡ ರಚಿಸಲಾಗಿದೆ. ಗಂಗಾವತಿ ಡಿವೈಎಸ್ ಪಿ ಆರ್.ಎಸ್. ಉಜ್ಜನಕೊಪ್ಪ ನೇತೃತ್ವದಲ್ಲಿ ಯಲಬುರ್ಗಾ ಸಿಪಿಐ ನಾಗರಡ್ಡಿ, ಕೊಪ್ಪಳ ನಗರ ಠಾಣೆಯ ಮಾರುತಿ ಗುಳಾರಿ, ಕುಕನೂರು ಪಿಎಸ್ಐ ವೆಂಕಟೇಶ, ಡಿಸಿಐಬಿ ಘಟಕದ ಪಿಎಸ್ಐ ಅಮರೇಶ ಹುಬ್ಬಳ್ಳಿ ಹಾಗೂ ನುರಿತ ತಾಂತ್ರಿಕ ಸಿಬ್ಬಂದಿಯನ್ನೊಳಗೊಂಡ ನಾಲ್ಕು ವಿಶೇಷ ಪತ್ತೆ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಮಾಹಿತಿ ನೀಡಿದ್ದಾರೆ.