ಶಿವಮೊಗ್ಗ: ನಮ್ಮ ಪಕ್ಷ ವಿಧಾನಸಭೆಯಲ್ಲಿ ಮಂಡನೆಯಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿರುವುದಕ್ಕೆ ನನಗೆ ಅಸಮಾಧಾನ ಹಾಗೂ ಅತೃಪ್ತಿ ಇದೆ ಎಂದು ಜೆಡಿಎಸ್ ಮುಖಂಡ ವೈಎಸ್‌ವಿ ದತ್ತಾ ಹೇಳಿದ್ದಾರೆ.
ರೈತ ಪರವಾದ ಪಕ್ಷ ಎಂದು ಜನರೇ ನಮಗೆ ಹಣೆಪಟ್ಟಿ ಕಟ್ಟಿದ್ದಾರೆ. ಹಾಗಾಗಿ ಅಂತಹ ಪಕ್ಷ ತೆಗೆದುಕೊಳ್ಳುವ ನಿಲುವು ಸಹ ರೈತರ ಪರವಾಗಿರಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೂ ಸಹ ಬೆಂಬಲ ನೀಡಿರುವುದು ದ್ವಂದ್ವ ನಿಲುವಾಗಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಜೊತೆ ಜೆಡಿಎಸ್ ವಿಲೀನಗೊಳಿಸುತ್ತಾರೆ ಎಂಬ ವಂದತಿ ಬಗ್ಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಜೆಡಿಎಸ್ ವಿಲೀನಗೊಳಿಸುವುದಿಲ್ಲ ಎಂಬ ಹೇಳಿಕೆಯನ್ನು ಕುಮಾರಸ್ವಾಮಿ ನೀಡಿರುವುದು ನನ್ನ ಮನಸ್ಸಿಗೆ ಸಮಾಧಾನ ತಂದಿದೆ ಎಂದರು.
ಯಾವುದೇ ರಾಜಕೀಯ ಪಕ್ಷಕ್ಕೆ ಸ್ಪಷ್ಟವಾದ ನಿಲುವು ಇರಬೇಕು. ಇಲ್ಲವಾದರೆ ಜನರ ಮಧ್ಯೆ ಮುಜುಗರಕ್ಕೆ ಒಳಗಾಗುವ ಜೊತೆಗೆ ಪಕ್ಷ ದುರ್ಬಲಗೊಳ್ಳುತ್ತದೆ ಎಂದರು.