ಶಿವಮೊಗ್ಗ: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಪೆಟ್ರೋಲ್, ಡೀಸೆಲ್ ಗ್ಯಾಸ್ ದರ ಏರಿಕೆ ಖಂಡಿಸಿ ಯೂತ್ ಕಾಂಗ್ರೆಸ್ ವತಿಯಿಂದ ವಿನೋಬ ನಗರದಲ್ಲಿರುವ ಸಂಸದ ಬಿ.ವೈ. ರಾಘವೇಂದ್ರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಳಿಕ ಮಾತನಾಡಿದ ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್, ಕೇಂದ್ರ ಸರ್ಕಾರ ಪ್ರತಿನಿತ್ಯ ಜನ ಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮಾಡುವ ಮೂಲಕ ಸಂಕಷ್ಟಕ್ಕೆ ದೂಡಿದೆ. ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಯಾರೂ ಸಹ ಈ ಕುರಿತು ಮಾತನಾಡದೇ ಮೋದಿಯವರ ಮುಂದೆ ಮೂಕ ಪ್ರೇಕ್ಷಕರಂತಿರುವುದು ಖಂಡನೀಯ. ರಾಜ್ಯಗಳಿಗೆ ಕೇಂದ್ರದಿಂದ ಬರುವ ಅನುದಾನದ ಕುರಿತು ಸಹ ಯಾರೂ ಮಾತನಾಡುತ್ತಿಲ್ಲ. ಹಾಗಾಗಿ ಸಂಸದರ ನಡವಳಿಕೆಗಳನ್ನು ವಿರೋಧಿಸಿ ಇಂದು ಸಂಸದ ಬಿ.ವೈ ರಾಘವೇಂದ್ರ ಅವರ ಮನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದೆವು ಎಂದರು.
ರಾಜ್ಯದ 25 ಸಂಸದರು ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಮಾತನಾಡಬೇಕು ಹಾಗೂ ಕೇಂದ್ರ ಸರ್ಕಾರ ಕೂಡಲೇ ಪೆಟ್ರೋಲ್, ಡೀಸೆಲ್ ದರವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.