ಶಿವಮೊಗ್ಗ: ರಾಜ್ಯ ಸರ್ಕಾರದ ಐದನೇ ಮತ್ತು ಕೊನೇಯ ಗ್ಯಾರಂಟಿ 'ಯುವನಿಧಿ' ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಪದವಿ ಹಾಗೂ ಡಿಪ್ಲೊಮಾ ಮಾಡಿದ ನಿರುದ್ಯೋಗಿ ಯುವ ಜನತೆಗೆ ನಿರುದ್ಯೋಗ ಭತ್ಯೆ ನೀಡುವ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯೇ 'ಯುವನಿಧಿ'.
ಬೈಲಹೊಂಗಲದಿಂದ ಬಂದಿರುವ ಯಶೋಧಾ ಪ್ರತಿಕ್ರಿಯಿಸಿ, "ಯುವನಿಧಿ ಯೋಜನೆಯನ್ನು ಜಾರಿ ಮಾಡುತ್ತಿರುವುದು ನಮ್ಮಂತಹ ನಿರುದ್ಯೋಗಿಗಳಿಗೆ ತುಂಬಾ ಅನುಕೂಲಕರವಾಗಲಿದೆ. ಮುಂದೆ ನಾವು ಉದ್ಯೋಗ ಹುಡುಕಲು ಈ ಯೋಜನೆ ಸಹಕಾರಿಯಾಗುತ್ತದೆ. ಇದೊಂದು ಉತ್ತಮ ಕಾರ್ಯಕ್ರಮ" ಎಂದರು.
ಶಿವಮೊಗ್ಗದ ಸಹನಾ ಮಾತನಾಡಿ, "ನಾನು ಪದವಿ ಮುಗಿಸಿದ್ದೇನೆ. ಸದ್ಯಕ್ಕೆ ಎಲ್ಲೂ ಉದ್ಯೋಗ ಸಿಗುತ್ತಿಲ್ಲ. ಈಗ ರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೇನೆ. ಇಂದು ಕಾರ್ಯಕ್ರಮಕ್ಕೆ ಬರಲು ನಮಗೆ ಮೆಸೇಜ್ ಬಂದಿತ್ತು. ಇದರಿಂದ ನಾನು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಸರ್ಕಾರ ಒಳ್ಳೆಯ ಯೋಜನೆ ಜಾರಿ ಮಾಡಿದೆ" ಎಂದು ಹೇಳಿದರು.
ಚಿತ್ರದುರ್ಗದ ಯುವತಿ ಶಿಲ್ಪ ಮಾತನಾಡುತ್ತಾ, "ನಾನು ದಾವಣಗೆರೆ ವಿವಿಯಲ್ಲಿ ಪದವಿ ಮುಗಿಸಿದ್ದೇನೆ. ನನಗೆ ಎಲ್ಲೂ ಉದ್ಯೋಗ ಸಿಗಲಿಲ್ಲ. ಯುವನಿಧಿ ಯೋಜನೆ ಜಾರಿ ಮಾಡಿ ರಾಜ್ಯ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ಈ ಯೋಜನೆ ಅನುಕೂಲಕರ" ಎಂದು ತಿಳಿಸಿದರು.
ಭದ್ರಾವತಿಯ ಸರ್ಕಾರಿ ಸರ್ಕಾರಿ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿ ಯತೀನ್ ಮಾತನಾಡಿ, "ರಾಜ್ಯ ಸರ್ಕಾರ ಒಳ್ಳೆಯ ಯೋಜನೆ ಜಾರಿ ಮಾಡುತ್ತಿದೆ. ಡಿಪ್ಲೊಮಾ ಮುಗಿಸಿ ಕೆಲಸ ಹುಡುಕಲು ಸಮಯ ಬೇಕಾಗುತ್ತದೆ. ನಮ್ಮ ಕಾಲೇಜಿನಿಂದ ಸ್ನೇಹಿತರ ಜೊತೆ ಆಗಮಿಸಿದ್ದೇನೆ. ಈ ಯೋಜನೆ ಮುಂದೆ ನಮ್ಮಂತಹವರಿಗೂ ಅನುಕೂಲವಾಗಲಿದೆ" ಎಂದು ಸಂತಸಪಟ್ಟರು.
ಇದನ್ನೂ ಓದಿ: ಶಿವಮೊಗ್ಗದಲ್ಲಿಂದು 'ಯುವನಿಧಿ' ಗ್ಯಾರಂಟಿಗೆ ಸಿಎಂ ಚಾಲನೆ; ಬೃಹತ್ ವೇದಿಕೆ ಸಿದ್ಧ