ಶಿವಮೊಗ್ಗ : ಪ್ರೀತಿಸಿ ಮದುವೆಯಾದ ವಿವಾಹಿತೆಯೊಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ದಾಸನಕೂಡಿಗೆ ಗ್ರಾಮದ ಶಮಿತ (26) ಮೃತರು.
ಕಳೆದ ವರ್ಷ ಮಾರ್ಚ್ನಲ್ಲಿ ಶಮಿತ ಅವರು ವಿದ್ಯಾರ್ಥ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ವಿದ್ಯಾರ್ಥ್ ಸೋಮೇಶ್ವರ ವನ್ಯಜೀವಿ ವಿಭಾಗದ ಅಮಾವಾಸ್ಯೆ ಬೈಲು ಅರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥ್ ಅವರು ಕೆಲ ದಿನಗಳಿಂದ ರಾತ್ರಿ ಕರ್ತವ್ಯದಲ್ಲಿದ್ದಾರೆ. ಅದೇ ರೀತಿ ಕಳೆದ ರಾತ್ರಿಯು ಸಹ ಕರ್ತವ್ಯಕ್ಕೆ ತೆರಳಿದ್ದರು.
ಬೆಳಗ್ಗೆಯಾದರೂ ಸಹ ಶಮಿತ ಮೇಲಿನ ಮಹಡಿಯಿಂದ ಕೆಳಗೆ ಇಳಿಯದೆ ಇರುವುದನ್ನು ಗಮನಿಸಿ, ಮನೆಯವರು ಮತ್ತು ಕೆಲಸದವರು ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೊಠಡಿಯಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಆರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪತಿಯ ಕಿರುಕುಳಕ್ಕೆ ಬೇಸತ್ತು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ : ಬುಧವಾರದಂದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ಗಂಡನ ಕಿರುಕುಳಕ್ಕೆ ಬೇಸತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಸರಸ್ವತಿ ಕಿರವೆ (26), ಮತ್ತು 7 ಮತ್ತು 4 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಮೃತರು. ಈ ಸಂಬಂಧ ಹಾರುಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಹಾರಾಷ್ಟ್ರದ ಸಾಂಗ್ಲಿ ನಿವಾಸಿ ಕಿರಣ ಎಂಬವರ ಜೊತೆ 2016ರಲ್ಲಿ ಸರಸ್ವತಿ ವಿವಾಹವಾಗಿದ್ದರು. ಕಿರಣ ಮದ್ಯವ್ಯಸನಿಯಾಗಿದ್ದು, ಆತನ ಕಿರುಕುಳಕ್ಕೆ ಬೇಸತ್ತು ತವರು ಮನೆ ಸುಲ್ತಾನಪುರಕ್ಕೆ ಬಂದಿದ್ದರು. ಬುಧವಾರ ಮುಂಜಾನೆ ಇವರು ಮನೆಯಿಂದ ಕಾಣೆಯಾಗಿದ್ದರು. ಕುಟುಂಬಸ್ಥರು ಆತಂಕಗೊಂಡು ತೋಟ, ಬಾವಿಯಲ್ಲಿ ಹುಡುಕಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಆತ್ಮಹತ್ಯೆಗೆ ಗಂಡನ ಕಿರುಕುಳವೇ ಕಾರಣ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದರು.
ಇದನ್ನೂ ಓದಿ : ದೊಡ್ಡಬಳ್ಳಾಪುರ: "ಬುಜ್ಜಿ ಐ ಮಿಸ್ ಯೂ.." ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ