ಶಿವಮೊಗ್ಗ : ಸಿಗಂದೂರು ದೇವಿಯ ಶಾಪದಿಂದ ಜನವರಿ 15 ಸಂಕ್ರಾಂತಿಯ ನಂತರ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಭವಿಷ್ಯ ನುಡಿದಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಗಂದೂರು ದೇವಾಲಯದ ವಿಚಾರದಲ್ಲಿ ಕೈ ಹಾಕಬೇಡಿ, ದೇವಿಯ ಶಾಪ ತಟ್ಟುತ್ತದೆ ಎಂದು ಈ ಹಿಂದೆ ಹೇಳಿದ್ದೆ. ಈಗ ಅದೇ ರೀತಿ ಆಗುತ್ತಿದೆ. ಒಂದು ಸಿಗಂದೂರು ದೇವಿಯ ಶಾಪದಿಂದ ಅವರ ಪಕ್ಷದವರಿಂದಲೇ ಯಡಿಯೂರಪ್ಪನವರು ತಮ್ಮ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ. ಹಾಗಂತಾ, ನಾನೇನು ಜ್ಯೋತಿಷಿ ಅಲ್ಲ ಎಂದರು.
ಹೊಸ ವರ್ಷಾಚರಣೆ ರದ್ದು ಹಿಂದೆ ಆರ್ಎಸ್ಎಸ್ : ಹೊಸ ವರ್ಷಾಚರಣೆ ರದ್ದು ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿರುವುದು ಖಂಡನೀಯ. ಹೊಸ ವರ್ಷ ಆಚರಣೆ ರದ್ದು ಮಾಡಿರುವ ಹಿಂದೆ ಆರ್ಎಸ್ಎಸ್ ಕೈವಾಡವಿದೆ. ಆರ್ಎಸ್ಎಸ್ನವರಿಗೆ ಬೇರೆ ಧರ್ಮದವರ ಬಗ್ಗೆ ಗೌರವವಿಲ್ಲ. ಇದರಿಂದ ಹೊಸ ಆಚರಣೆಗೆ ಬ್ರೇಕ್ ಹಾಕಿಸಿದ್ದಾರೆ.
ಆರ್‌ಆರ್‌ನಗರ ಉಪ ಚುನಾವಣೆಯಲ್ಲಿ 15 ರಿಂದ 20 ಸಾವಿರ ಜನ ಸೇರಿ ಚುನಾವಣಾ ಪ್ರಚಾರ ಹಾಗೂ ವಿಜಯದ ಮೆರವಣಿಗೆ ನಡೆಸುತ್ತಾರೆ. ಆದರೆ, ಹೊಸ ವರ್ಷ ಆಚರಣೆ ಮಾಡಬಾರದು ಅಂತಾ ಆದೇಶ ಮಾಡುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.
ಓದಿ...ಜನವರಿ 1 ರಿಂದ ಶಾಲೆ ಆರಂಭ ನಿರ್ಧಾರದಲ್ಲಿ ಬದಲಾವಣೆ ಇಲ್ಲ: ಸಿಎಂ
ಯುವಕರು ಹೊಸ ವರ್ಷಾಚರಣೆ ನಡೆಸಿ ಕುಡಿದು ಬೀದಿಯಲ್ಲಿ ಬೀಳುವುದಿಲ್ಲ. ಎಲ್ಲರೂ ಅವರ ಮನೆಗೆ ಹೋಗ್ತಾರೆ. ಇದರಿಂದ ಹೊಸ ವರ್ಷ ಆಚರಣೆಗೆ ಅವಕಾಶ ನೀಡಬೇಕು. ನಾನಂತೂ ಯುವಕರ ಪರವಾಗಿಯೇ ಇದ್ದೇನೆ ಎಂದರು.
ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಇದರಿಂದ ಯುವಕರ ಬಗ್ಗೆ ಅವರಿಗೆ ಅಸಡ್ಡೆ ಬಂದಿದೆ. ಸರ್ಕಾರ ಹೊಸ ವರ್ಷಾಚರಣೆಗೆ ಅವಕಾಶ ಮಾಡಿ ಕೊಡಬೇಕೆಂದರು.
ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ : ಎರಡು ಹಂತದ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ತಮ್ಮ ಪಕ್ಷದ ಬೆಂಬಲಿಗರಿಗೆ ಹಣ ನೀಡಿ ಚುನಾವಣೆ ನಡೆಸಿದೆ. ಸ್ಥಳೀಯ ಮಟ್ಟದಲ್ಲೂ ಸಹ ಇಷ್ಟೊಂದು ಹಣ ಹರಿಸಿದ್ದು ಇದೇ ಮೊದಲು ಎನ್ನಿಸುತ್ತದೆ.
ಆದರೂ ಸಹ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹುಲ್ತಿಕೊಪ್ಪ ಶ್ರೀಧರ್ ಹಾಜರಿದ್ದರು.