ಶಿವಮೊಗ್ಗ : ಕೆಳದಿ ಅರಸ ವೆಂಕಟಪ್ಪ ನಾಯಕರ ಪ್ರೇಯಸಿ ಚಂಪಕ ಎಂಬುವರ ಸವಿನೆನಪಿಗಾಗಿ ನಿರ್ಮಿಸಿದ ಕೊಳ ಇಂದಿನ ಚಂಪಕ ಸರಸ್ಸು ಎಂದು ಕರೆಯಲ್ಪಡುವ ಸುಂದರ ಕೊಳ. ಈ ಕೊಳಕ್ಕೆ 400 ವರ್ಷಗಳ ಇತಿಹಾಸವಿದೆ. ಈ ಸುಂದರ ಕೊಳ ಸಾಗರ ತಾಲೂಕು ಆನಂದಪುರಂ ಬಳಿ ಇದ್ದು, ಪ್ರವಾಸಿಗರ ನೆಚ್ಚಿನ ತಾಣ.
ಈ ಕೊಳವನ್ನು ನಟ ಯಶ್ ನಡೆಸುತ್ತಿರುವ ಯಶೋಮಾರ್ಗ ಅಭಿವೃದ್ಧಿಪಡಿಸಲು ಈಗ ಮುಂದೆ ಬಂದಿದೆ. ಕೊಳವನ್ನ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. ಕೊಳದ ಸುತ್ತ ಕಲ್ಲಿನಲ್ಲಿ ಸುಂದರವಾಗಿ ಕೆತ್ತನೆ ಮಾಡಲಾಗಿದೆ. ಕೊಳದ ಮಧ್ಯದಲ್ಲಿ ಶಿವನ ಸಣ್ಣ ಗುಡಿ ಇದೆ. ಗುಡಿಗೆ ಹೋಗಲು ಕಲ್ಲಿನ ದಾರಿ ಇದೆ.
ಕೊಳದ ಪ್ರವೇಶದಲ್ಲಿ ಕಲ್ಲಿನ ಆನೆಗಳಿವೆ. ಇಂತಹ ಸುಂದರ ಕೊಳವನ್ನು ಅಭಿವೃದ್ಧಿಪಡಿಸಲು ಯಶೋ ಮಾರ್ಗವು ಹೈದರಾಬಾದ್ನ ಫ್ರೀಡಂ ಆಯಿಲ್ ಅಸೋಸಿಯೇಷನ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಚಂಪಕ ಸರಸ್ಸು ಅಭಿವೃದ್ದಿಗೆ ಜಲ ತಜ್ಞ ಶಿವಾನಂದ ಕಳವೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಹಿಂದೆ ರಾಜ್ಯದ ಕೆರೆಗಳ ಅಭಿವೃದ್ಧಿ ಕುರಿತು ಯಶ್ ಅವರ ಜೊತೆ ಚರ್ಚೆ ಮಾಡುವಾಗ ಚಂಪಕ ಸರಸ್ಸು ಕೊಳ ನೋಡಿದ್ದರು. ಈಗ ಅವರ ಅಭಿಮಾನಿಗಳ ಮೂಲಕ ಇದನ್ನು ಅಭಿವೃದ್ಧಿಪಡಿಸಲು ಮುಂದಾಗಿರುವುದು ಖುಷಿಯ ವಿಚಾರ ಎಂದರು.
ಚಂಪಕ ಸರಸ್ಸು ಅಭಿವೃದ್ಧಿ ಹೇಗೆ?: ಕೊಳದ ಪುನರುಜ್ಜೀವನದಲ್ಲಿ ಕೊಳದ ಸುತ್ತಲು ಜಾಗದ ಸ್ವಚ್ಛತೆ, ಪುರಾತನ ಕಟ್ಟೆ ಮೇಲಿನ ಮರ, ಗಿಡಗಳನ್ನು ತೆಗೆದು ದುರಸ್ಥಿ ಮಾಡುವುದು, ಸುತ್ತಲು ಬೇಲಿ ನಿರ್ಮಿಸುವುದು, ಗೇಟ್ ಅಳವಡಿಸುವುದು ಹಾಗೂ ಕೊಳದ ಕುರಿತ ಫಲಕ ಹಾಕುವುದು, ಹೀಗೆ ವಿವಿಧ ಅಭಿವೃದ್ಧಿ ಕಾರ್ಯ ನಡೆಸಲು ಯಶೋಮಾರ್ಗ ಪ್ಲಾನ್ ರೂಪಿಸಿದೆ.
ಈಗಾಗಲೇ ಉತ್ತರ ಕರ್ನಾಟಕದಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಿರುವ ಯಶೋ ಮಾರ್ಗದ ಕಾರ್ಯಕ್ಕೆ ಮಲೆನಾಡಿಗರು ಫಿದಾ ಆಗಿದ್ದಾರೆ. ಈಗ ಮಲೆನಾಡಿನ ಸುಂದರ ಕೊಳವನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದನ್ನು ಸ್ವಾಗತ ಮಾಡಿದ್ದಾರೆ.
ಈ ವೇಳೆ ಅಖಿಲ ಕರ್ನಾಟಕ ಯಶ್ ಅಭಿಮಾನಿ ಸಂಘದ ಅಧ್ಯಕ್ಷ ಸತೀಶ್ ಶಿವಣ್ಣ, ಅಖಿಲ ಭಾರತ ಯಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಕೇಶ್ ಹಾಗೂ ಸಂಸ್ಥಾಪಕರು ಯಶ್ ಅಭಿಮಾನಿಗಳ ಸಂಘದ ಶ್ರೀಗಂಧ ಅವರು ಹಾಗೂ ಅಭಿಯಾನ ಟ್ರಸ್ಟ್‌ನ ಅಧ್ಯಕ್ಷರಾದ ರಾಜೇಂದ್ರ ಗೌಡ್ರು, ಪ್ರಧಾನ ಕಾರ್ಯದರ್ಶಿ ಬಿ ಡಿ ರವಿ ಸೇರಿ ಸ್ಥಳೀಯ ಮುಖಂಡರು ಹಾಜರಿದ್ದರು.