ಶಿವಮೊಗ್ಗ: ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನಗರಕ್ಕೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿದರು. ಈ ವೇಳೆ ಮಹಿಳೆಯೊಬ್ಬರು ಸಚಿವರನ್ನು ತರಾಟೆ ತಗೆದುಕೊಂಡ ಘಟನೆ ನಡೆಯಿತು.
ಕಳೆದೊಂದು ವಾರದಿಂದ ಸುರಿದ ಮಳೆಗೆ ನಗರದಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಇಂದು ಸಚಿವ ಈಶ್ವರಪ್ಪ ಅಧಿಕಾರಿಗಳೊಂದಿಗೆ ಹಾನಿಗೀಡಾಗಿರುವ ಇಮಾಂ ಬಾಡ, ಶಾಂತಮ್ಮ ಲೇಔಟ್, ಕುಂಬಾರಗುಂಡಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಿಳೆಯಿಂದ ಸಚಿವರಿಗೆ ತರಾಟೆ:
ಶಾಂತಮ್ಮ ಲೇಔಟ್ ಪರಿಶೀಲನೆ ನಡೆಸುತ್ತಿದ್ದ ವೇಳೆ ಸಚಿವರಿಗೆ ಮಹಿಳೆಯೊಬ್ಬಳು ತರಾಟೆ ತಗೆದುಕೊಂಡರು. ಪ್ರತಿವರ್ಷ ಹೀಗೆ ಪ್ರವಾಹ ಆಗುತ್ತದೆ. ನಮಗೆ ಶಾಶ್ವತ ಪರಿಹಾರ ಒದಗಿಸಿ ಕೊಡಿ ಎಂದು ಆಗ್ರಹಿಸಿದರು.
ಪರಿಶೀಲನೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಅತಿವೃಷ್ಟಿಯಿಂದ ಶಿವಮೊಗ್ಗ ನಗರದ ಸುಮಾರು 15 ಭಾಗಗಳಲ್ಲಿ ನೀರುನುಗ್ಗಿ ಅಪಾರ ಹಾನಿ ಸಂಭವಿಸಿತ್ತು. ಆದರೆ, ಈ ಬಾರಿ ಮುಂಗಾರು ಆಗಮನಕ್ಕಿಂತ ಮೊದಲೇ ರಾಜಕಾಲುವೆಗಳನ್ನು ಸ್ವಚ್ಛಗೊಳಿಸಲಾಗಿದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ನಗರದಲ್ಲಿ ಯಾವುದೇ ಮನೆಗಳು ಬಿದ್ದಿಲ್ಲ. ಆದರೆ ಜಿಲ್ಲೆಯಲ್ಲಿ ಹತ್ತು ಮನೆಗಳು ಬಿದ್ದಿವೆ ಎಂದರು.
ನಗರದ ನಾಲ್ಕು ಕಡೆಗಳಲ್ಲಿ ನೀರು ನುಗ್ಗಿದ್ದು, ಹಾನಿಯನ್ನು ಪರಿಶೀಲಿಸಲಾಗುತ್ತಿದೆ. ನಗರದಲ್ಲಿ ನಾಲ್ಕು ಕಡೆಗಳಲ್ಲಿ ತಾತ್ಕಾಲಿಕವಾಗಿ ಅತಿವೃಷ್ಟಿ ಪೀಡಿತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಹಾನಿಗೆ ಪರಿಹಾರ ನೀಡುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಂಗಳವಾರ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್, ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಮಹಾನಗರ ಪಾಲಿಕೆ ಕಮಿಷನರ್ ಚಿದಾನಂದ ವಠಾರೆ, ಉಪಸ್ಥಿತರಿದ್ದರು.
ಓದಿ: 7 ದಿನಗಳಿಂದ 1 ಪೈಸೆಯೂ ಹೆಚ್ಚಾಗದ ತೈಲ ಬೆಲೆ.. ಇಂಧನ ಬೆಲೆ ಸ್ಥಿರತೆಗೆ ಪ್ರಮುಖ ಕಾರಣ ಇದು...