ಶಿವಮೊಗ್ಗ: ದೇಶದಾದ್ಯಂತ ಕೊರೊನಾ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿಯೂ ವೈರಸ್ ಹರಡದಂತೆ ತಡೆಯಲು ಆರೋಗ್ಯ ಇಲಾಖೆಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ನಾವು ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಜ್ಜಾಗಿದ್ದೇವೆ ಎಂದು ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಹೇಳಿದ್ದಾರೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈರಸ್ ಪೀಡಿತರಿಗೆ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಶಂಕಿತ ಪ್ರಕರಣಗಳು ಕಂಡು ಬಂದಲ್ಲಿ ಅವರಿಗೆ ಇದೇ ವಾರ್ಡ್ನಲ್ಲಿ ಸೂಕ್ತ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಜನವರಿ ತಿಂಗಳಿನಲ್ಲಿ ನಾಲ್ಕು ಜನ ವಿದ್ಯಾರ್ಥಿಗಳು ಚೀನಾದಿಂದ ಶಿವಮೊಗ್ಗಕ್ಕೆ ಬಂದಿದ್ದು, ಅವರನ್ನು ನಾಲ್ಕು ವಾರಗಳ ಕಾಲ ಆರೋಗ್ಯ ಇಲಾಖೆ ನಿಗಾದಲ್ಲಿರಿಸಿತ್ತು. ಬಳಿಕ ಅವರಲ್ಲಿ ಯಾವುದೇ ಸೋಂಕು ಇಲ್ಲದಿರುವುದು ತಿಳಿದು ಬಂದಿತು ಎಂದರು.
ಫೆಬ್ರವರಿ ತಿಂಗಳಿನಲ್ಲಿ ಆರು ಮಂದಿ ಕೊರೊನಾ ಪೀಡಿತ ಪ್ರದೇಶಗಳಿಂದ ಶಿವಮೊಗ್ಗಕ್ಕೆ ಬಂದಿದ್ದು, ಅವರನ್ನು ಅವರ ಮನೆಯಲ್ಲೇ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಒಟ್ಟಾರೆಯಾಗಿ ಶಿವಮೊಗ್ಗದಲ್ಲಿ ಕೊರೊನಾ ವೈರಸ್ ಬಾರದಂತೆ ತಡೆಯಲು ಆರೋಗ್ಯ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದರು.