ಶಿವಮೊಗ್ಗ: ದಶಕಗಳ ಹೋರಾಟದ ಫಲವಾಗಿ ನಿರ್ಮಾಣವಾಗುತ್ತಿರುವ ರಾಜ್ಯದ ಬೃಹತ್ ಗಾತ್ರದ ಸೇತುವೆಗಳಲ್ಲಿ ಒಂದಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಂಬರಗೊಡ್ಲುವಿನ ಶರಾವತಿ ಹಿನ್ನೀರಿನ ಸೇತುವೆಗೆ ನೀರೇ ಕಂಟಕವಾಗಿದೆ. ಈ ಬಾರಿ ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಕೈ ಕೊಟ್ಟ ಕಾರಣಕ್ಕೆ ಹಿನ್ನೀರಿನ ಸಂಗ್ರಹ ಕಡಿಮೆಯಾಗಿದ್ದು, ಸೇತುವೆ ಕಾಮಗಾರಿಗೆ ಅಡ್ಡಿ ಉಂಟುಮಾಡಿದೆ.
ಸೇತುವೆ ಕಾಮಗಾರಿಗೆ ನೀರು ಅಡ್ಡಿ ಆಗುತ್ತಿರುವ ಬಗ್ಗೆ ಮುಖ್ಯ ಇಂಜಿನಿಯರ್ ಪೀರ್ ಪಾಶ ಮಾಹಿತಿ ನೀಡಿದ್ದಾರೆ. ಈ ಸೇತುವೆ ಪ್ರಾರಂಭಗೊಂಡಾಗ 2020-2021ರಲ್ಲಿ ನೀರಿನ ಪ್ರಮಾಣ ಕಡಿಮೆ ಆಗದೆ ಸೇತುವೆಯ ಪಿಲ್ಲರ್ಗೆ ಪೈಲ್ ಕ್ಯಾಪ್ ಹಾಕಲಾಗದೆ 539 ಮೀಟರ್‌ನಷ್ಟು ನೀರು ಬೇಕಾಗಿತ್ತು. ಆದರೆ 540 ಮೀಟರ್ಗೂ ನೀರಿನ ಮಟ್ಟ ಕಡಿಮೆ ಆಗದ ಕಾರಣ ಕಾಮಗಾರಿಗೆ ತೊಂದರೆ ಆಗಿತ್ತು. 2022ರಲ್ಲಿ ಕ್ಯಾಪ್ ಅಳವಡಿಸಿ ಕಾಮಗಾರಿಯನ್ನು ವೇಗವಾಗಿ ನಡೆಸಲಾಗಿತ್ತು.
ಈ ವರ್ಷ ನೀರು ಕಡಿಮೆಯಾಗಿ ಬಾರ್ಜ್ ಓಡಾಡಲಾಗದೆ ಕಾಮಗಾರಿ ಎರಡು ತಿಂಗಳು ಸ್ಥಗಿತವಾಗುವ ಹಂತ ತಲುಪಿತ್ತು. ಒಟ್ಟು 604 ಸೆಗ್ಮೆಂಟ್ ಎರಿಕ್ಷನ್ನಲ್ಲಿ 160 ಸಗ್ಮೆಂಟ್ ಎರಿಕ್ಷನ್ ಮಾಡಲಾಗಿತ್ತು. ಮುಂದಿನ ಒಂದು ವರ್ಷದಲ್ಲಿ ಉಳಿದ ಎರಿಕ್ಷನ್ ಮಾಡಬೇಕಿದೆ. ಇದಕ್ಕೆ ಕೇಬಲ್ ಅಳವಡಿಸಿ, 2024ರ ನವೆಂಬರ್‌ನಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ. ಈಗ 530 ಮೀಟರ್ಗೆ ನೀರು ಕಡಿಮೆ ಆಗುತ್ತದೆ. ಇದರಿಂದ ಕಾಮಗಾರಿಗೆ ಅಡಚಣೆ ಉಂಟಾಗುತ್ತದೆ. ಇದರಿಂದ 2024ರ ನವೆಂಬರ್ಗೆ ಕಾಮಗಾರಿ ಪೂರ್ಣವಾಗುವುದು ಕಷ್ಟಕರವಾಗುತ್ತದೆ ಎಂದು ತಿಳಿಸಿದ್ದಾರೆ.
ಸೇತುವೆಗೆ ಸಂಪರ್ಕ ಕಲ್ಪಿಸುವ ಎರಡು ಕಡೆಯ ರಸ್ತೆ ನಿರ್ಮಾಣ ಮಾಡಬೇಕಿದೆ. ಅಂಬಾರಗೂಡ್ಲು ಭಾಗದಲ್ಲಿ ಒಂದು ಕಿ.ಮೀ ಹಾಗೂ ಸಿಗಂದೂರು ದೇವಾಲಯದ ಕಡೆ 3 ಕಿ.ಮೀವರೆಗೂ ಕಾಮಗಾರಿ ಪ್ರಾರಂಭಗೊಂಡಿದೆ. ಸೇತುವೆ ನಿರ್ಮಾಣವಾದರೆ ರಸ್ತೆಗಳು ರಾಷ್ಟ್ರೀಯ ರಸ್ತೆಗೆ ಅನುಗುಣವಾಗಿ ಇಲ್ಲ. ಇವುಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾರ್ಪಾಡು ಮಾಡಬೇಕಿದೆ. ತುಮರಿಯಿಂದ ಮರಕುಟಕದವರೆಗೂ ಸಿಂಗಲ್ ಲೈನ್ ರಸ್ತೆ ಇದೆ. ಇದನ್ನು ದ್ವಿಪಥ ರಸ್ತೆಯನ್ನಾಗಿ ಮಾಡಬೇಕಿದ್ದು, ಇದಕ್ಕಾಗಿ ಯೋಜನಾ ವರದಿ ಮಾಡಬೇಕಿದೆ.
ಈಗಿನ ರಸ್ತೆಯಲ್ಲಿ ಭಾರಿ ತಿರುವುಗಳಿರುವುದರಿಂದ ಈ ತಿರುವುಗಳನ್ನು ಕಡಿಮೆ ಮಾಡಿ, ಉದ್ದ ಮಾಡಲು ಡಿಪಿಆರ್ ಮಾಡಲು ಕ್ರಮ ಜರುಗಿಸಲಾಗಿದೆ. ಡಿಪಿಆರ್ ಪಡೆದ ನಂತರ ರಸ್ತೆ ಕಾಮಗಾರಿ ಮುಂದಿನ ವರ್ಷ ನಡೆಸಲಾಗುತ್ತದೆ. ಸೇತುವೆ ಕಾಮಗಾರಿ ಮುಕ್ತಾಯವಾದರೆ ಈ ಭಾಗ ಆಕರ್ಷಣೀಯ ಕೇಂದ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ದೇವಾಲಯಕ್ಕೆ ಹೋಗುವ ಭಕ್ತರಿಗೆ ಹಾಗೂ ದ್ವೀಪದ ಜನತೆಗೆ ಅನುಕೂಲವಾಗಲಿದೆ. ರಸ್ತೆ ಕಾಮಗಾರಿಗೆ ಅಂದಾಜು 600-700 ಕೋಟಿ ರೂ ಬೇಕಾಗಬಹುದು. ಈಗ ಸಾಗರದಿಂದ ಮರಕುಟುಕ 67 ಕಿ.ಮೀ ದೂರ ಇದೆ. ತಿರುವು ಕಡಿಮೆ ಮಾಡಿದರೆ ಕಿ.ಮೀ ಕಡಿಮೆ ಆಗಬಹುದು ಎಂದು ಪೀರ್ ಪಾಶ ಮಾಹಿತಿ ನೀಡಿದ್ದಾರೆ.
ಸಾಗರಕ್ಕೆ ಹಗಲು-ರಾತ್ರಿ ಓಡಾಡಲು ಸೇತುವೆ: ಲಿಂಗನಮಕ್ಕಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಸುಮಾರು 23 ಅಡಿಗಳಷ್ಟು ನೀರು ಕಡಿಮೆ ಇದೆ. ನೀರು ಕಡಿಮೆಯಾದ ಕಾರಣಕ್ಕೆ ಕಾಮಗಾರಿಯು ಆಮೆ ವೇಗದಲ್ಲಿ ನಡೆಯುತ್ತಿದೆ. ಹಾಲಿ ಸಿಗಂದೂರು ಭಾಗದ ಜನತೆಯು ಬಾರ್ಜ್ ಮೂಲಕ ಇತರೆ ಭಾಗಗಳಿಗೆ ಸಂಪರ್ಕ ಸಾಧಿಸುತ್ತಿದ್ದಾರೆ. ಬಾರ್ಜ್ ಸೇವೆ ಹಗಲು ಹೊತ್ತು ಮಾತ್ರ ಇರುತ್ತದೆ. ರಾತ್ರಿ ವೇಳೆ ಏನಾದರೂ ಅನಾಹುತವಾದರೆ, ಅವರು ಸಾಗರ ತಲುಪಲು ಕಾರ್ಗಲ್-ಜೋಗ ಮಾರ್ಗದ ಮೂಲಕ ಸುಮಾರು 40 ಕಿ.ಮೀ ದೂರ ಸಾಗಬೇಕಿದೆ. ಸೇತುವೆ ನಿರ್ಮಾಣವಾದರೆ, ಅವರು ಸಾಗರಕ್ಕೆ ಹಗಲು- ರಾತ್ರಿ ಓಡಾಡಬಹುದು.
ಶರಾವತಿ ಹಿನ್ನೀರಿಗೆ ಸೇತುವೆ: 2010ರಲ್ಲಿ ಶರಾವತಿ ಹಿನ್ನಿರಿಗೆ ಸೇತುವೆ ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗಿತ್ತು. ಅಲ್ಲದೆ ಇದು ಜಿಲ್ಲಾ ಮುಖ್ಯರಸ್ತೆ ಆಗಿತ್ತು. ಜೊತೆಗೆ ವನ್ಯಜೀವಿ ಅರಣ್ಯ ಪ್ರದೇಶವಾಗಿದ್ದ ಕಾರಣ ಸೇತುವೆ ನಿರ್ಮಾಣಕ್ಕೆ ಸಾಧ್ಯವಾಗಿರಲಿಲ್ಲ. ಈ ರಸ್ತೆಯ ಮೂಲಕ ಸಿಗಂದೂರು ಹಾಗೂ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಜಿಲ್ಲಾ ಮುಖ್ಯ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಿ, ಕೇಂದ್ರದ ವನ್ಯಜೀವಿ ವಿಭಾಗದಿಂದ ರಸ್ತೆ ನಿರ್ಮಾಣಕ್ಕೆ ಅನುಮತಿ ಪಡೆದು ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ 423.15 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಕಾರ್ಯವನ್ನು 2019 ರ ಮಾರ್ಚ್‌ನಲ್ಲಿ ಅನುಮೋದನೆ ಪಡೆಯಲಾಗಿತ್ತು. ಟೆಂಡರ್ ಪೂರ್ಣಗೊಂಡು 2019 ಡಿಸಂಬರ್‌ನಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ.
ಶರಾವತಿ ಹಿನ್ನಿರಿನಲ್ಲಿ 2.14 ಕಿ.ಮೀ ಉದ್ದದ 16 ಮೀಟರ್ ಅಗಲದ ದ್ವಿಪಥದ ಸೇತುವೆ ಕಾಮಗಾರಿ ನಡೆಯುತ್ತಿದೆ. ಈ ಸೇತುವೆಯ ವಿಶೇಷತೆ ಏನೆಂದರೆ, ಆಧುನಿಕತೆಯ ವಿನ್ಯಾಸವನ್ನು ಹೊಂದಿದೆ. ಸ್ಪ್ಯಾನ್ ಲೆನ್ತ್ 177 ಮೀಟರ್ ಇದೆ. ಸ್ಲಾಬ್ ರಸ್ತೆ ಇದು ಕೇಬಲ್ ನಿಯಂತ್ರಣದಿಂದ ನಿಂತಿರುವ ಸೇತುವೆ ಆಗಿರುತ್ತದೆ. ಸ್ಪ್ಯಾನ್ ಲೆನ್ಥ್ 177 ಹೊಂದಿರುವ ಅತಿ ಕಡಿಮೆ ಸೇತುವೆಗಳಲ್ಲಿ ಇದು ಒಂದಾಗಿದೆ. ಇದು ಕೇಬಲ್ ಆಧಾರಿತ ಭಾರತದ ಎಂಟನೇ ಸೇತುವೆ ಮತ್ತು ರಾಜ್ಯದ ವಿಶಿಷ್ಟವಾದ, ಆಧುನಿಕ ತಂತ್ರಜ್ಞಾನದಿಂದ ನಿರ್ಮಿತವಾಗುತ್ತಿರುವ ಸೇತುವೆಯಾಗಿದೆ. 16 ಮೀಟರ್ ಅಗಲದ ಸೇತುವೆಯಲ್ಲಿ 1.5 ಮೀಟರ್ ಅಗಲದ ಎರಡು ಕಡೆ ಫುಟ್‌ಪಾತ್ ಇರಲಿದೆ. ನಾಲ್ಕು ಸ್ಪ್ಯಾನ್ ಕೇಬಲ್ ಇರುತ್ತದೆ. ನೀರಿನ ಆಳ 50-60 ಮೀಟರ್ ಆಳ ಇದ್ದ ಕಾರಣ ಇದನ್ನು ಕೇಬಲ್ ಸೇತುವೆಯನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ. 740 ಮೀಟರ್ ಕೇಬಲ್ ಆಧಾರಿತ ಸೇತುವೆ ಇರಲಿದೆ. ಉಳಿದವು ಬ್ಯಾಲೆನ್ಸ್ ಆಧಾರಿತ ಬ್ರಿಡ್ಜ್ ಆಗಿದೆ.
ಇದನ್ನೂ ಓದಿ: ಮೈಸೂರು, ಹಾಸನ ಜಿಲ್ಲೆಯಲ್ಲಿ ಅರ್ಜುನ ಆನೆಯ ಸ್ಮಾರಕ ನಿರ್ಮಾಣ: ಸಚಿವ ಈಶ್ವರ ಖಂಡ್ರೆ