ಶಿವಮೊಗ್ಗ: ನಿಷೇಧಿತ ಸಂಘಟನೆಗಳಾದ ಪಿಎಫ್‌ಐ ಮತ್ತು ಸಿಎಫ್ಐ ಸೇರುವಂತೆ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಗೋಡೆ ಬರಹ ಬರೆಯಲಾಗಿದೆ. ಶಿರಾಳಕೊಪ್ಪ ಪಟ್ಟಣದ 9ಕ್ಕೂ ಹೆಚ್ಚು ಕಡೆ ಈ ರೀತಿಯ ಬರಹಗಳು ಗೋಚರಿಸಿವೆ. ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನವೆಂಬರ್ 25ರಂದು ಗೋಡೆ ಬರಹ ಬರೆಯಲಾಗಿದ್ದು, ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ನವೆಂಬರ್ 28ರಂದು ಸ್ವಯಂ ದೂರು ದಾಖಲಿಸಲಾಗಿದೆ. JOIN PFI ಮತ್ತು CFI ಎಂದು ಶಿರಾಳಕೊಪ್ಪದ ಹಳೆ ಪೆಟ್ರೋಲ್ ಬಂಕ್ ಪಕ್ಕದ ಸಿಮೆಂಟ್ ಕಾಂಪೌಂಡ್, ಬೋವಿ ಕಾಲೋನಿಗೆ ಹೋಗುವ ವಿದ್ಯುತ್ ಕಂಬ, ದೊಡ್ಡ ಬ್ಯಾಣದಕೇರಿಗೆ ಹೋಗುವ ಕ್ರಾಸ್ ಬಳಿ ಗೋಡೆ ಮತ್ತು ವಿದ್ಯುತ್ ಕಂಬ ಸೇರಿ ವಿವಿಧೆಡೆ ಬರೆಯಲಾಗಿದೆ.
ಇದನ್ನೂ ಓದಿ: ಯುಎಪಿಎ ಪ್ರಕರಣ.. ಶಿವಮೊಗ್ಗ ಜಿಲ್ಲೆಗೆ ಮತ್ತೆ ಎನ್ಐಎ ತಂಡ ಭೇಟಿ
ಈ ಬರಹಗಳನ್ನು ನೀಲಿ, ಕೆಂಪು ಬಣ್ಣದ ಸ್ಪ್ರೇಯಿಂದ ಬರೆದು ಸ್ಟಾರ್ ಇಡಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ನಾಗರಾಜ್ ಗಸ್ತಿನಲ್ಲಿರುವಾಗ ಪ್ರಕರಣ ಬೆಳಕಿಗೆ ಬಂದಿದೆ. ನಾಗರಾಜ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ನಿಷೇಧಿತ ಸಂಘಟನೆಗಳ ಕುರಿತು ಗೋಡೆ ಬರಹ ಬರೆದು ದುಷ್ಕೃತ್ಯ ಮೆರೆದಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಪಿಎಫ್‌ಐ ಬ್ಯಾನ್ ಎತ್ತಿ ಹಿಡಿದ ಹೈಕೋರ್ಟ್