ಶಿವಮೊಗ್ಗ: ಮಲೆನಾಡಿನ ಸುಂದರ ಪರಿಸರದಲ್ಲಿರುವ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾನಿಲಯದ 29ನೇ ಘಟಿಕೋತ್ಸವವನ್ನು ಸರಳವಾಗಿ ನಡೆಸಲಾಯಿತು.
ವಿವಿಯ ಸಭಾಂಗಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಈ ಬಾರಿಯ ಗೌರವ ಡಾಕ್ಟರೇಟ್ ಪದವಿಯನ್ನು ಹಾಸನದ ಕೋಡಿ ಮಠದ ಶಿವನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳಿಗೆ ನೀಡಲಾಯಿತು. ರಾಜ್ಯಪಾಲರು ಹಾಗೂ ಸಚಿವರು ಇಲ್ಲದ ಕಾರಣ ಘಟಿಕೋತ್ಸವವನ್ನು 20 ನಿಮಿಷ ಬೇಗ ಪ್ರಾರಂಭ ಮಾಡಲಾಯಿತು. ಮೊದಲಿಗೆ ವಿವಿಯಿಂದ ಕೊಡುವ ಗೌರವ ಡಾಕ್ಟರೇಟ್ ಪದವಿಯನ್ನು ಕೋಡಿ ಮಠದ ಶ್ರೀಗಳಿಗೆ ನೀಡಿದ ನಂತ್ರ ಪಿಹೆಚ್‌ಡಿ ಹಾಗೂ ಸ್ನಾತ್ತಕೋತ್ತರ ಪದವಿ ಮತ್ತು ಪದವಿಗಳ ರ್ಯಾಂಕ್ ವಿತರಣೆ ಮಾಡಲಾಯಿತು.
ಈ ಬಾರಿಯು ಸಹ ವಿವಿಯಲ್ಲಿ ಹುಡುಗಿಯರೇ ಹೆಚ್ಚು ರ್ಯಾಂಕ್ ಹಾಗೂ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕನ್ನಡ ವಿಭಾಗದಲ್ಲಿ ಚಿಕ್ಕಮಗಳೂರಿನ ಕನ್ನಡ ಸ್ನಾತ್ತಕೋತ್ತರ ಕೇಂದ್ರದ ನೇತ್ರಾವತಿ ಕೆ.ಎ. ಏಳು ಚಿನ್ನದ ಪದಕ ಹಾಗೂ ಒಂದು ನಗದು ಬಹುಮಾನ ಪಡೆದುಕೊಂಡಿದ್ದಾರೆ. ಇವರು ಬಡ ಕುಟುಂಬದಿಂದ ಬಂದಂತಹ ವಿದ್ಯಾರ್ಥಿನಿಯಾಗಿದ್ದು, ಇವರ ತಂದೆ ಹಮಾಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಕುಟುಂಬದವರ ಹಾಗೂ ಕಾಲೇಜಿನವರ ಬೆಂಬಲದಿಂದ ಸಾಧನೆ ಮಾಡಲು ಸಾಧ್ಯವಾಯಿತು. ಮುಂದೆ ಪಿಹೆಚ್‌ಡಿ ಮಾಡಿ ಉಪನ್ಯಾಸಕಿಯಾಗಬೇಕು ಎಂಬ ಬಯಕೆ ಇದೆ ಎಂದು ನೇತ್ರಾವತಿ ಹೇಳಿದರು.
ಇನ್ನು ಶಂಕರಘಟ್ಟದ ಗಣಿತ ಶಾಸ್ತ್ರ ಎಂ.ಎಸ್ಸಿ ವಿಭಾಗದಲ್ಲಿ ವಿಮಲಾ ಎಂಬುವರು ಮೂರು ಚಿನ್ನದ ಪದಕ ಹಾಗೂ ಒಂದು ನಗದು ಬಹುಮಾನ ಪಡೆದುಕೊಂಡಿದ್ದಾರೆ. ವಿವಿಧ ವಿಭಾಗಗಳಲ್ಲಿ ಅನೇಕರು ಸ್ವರ್ಣ ಹಾಗೂ ನಗದು ಬಹುಮಾನ ಪಡೆದುಕೊಂಡಿದ್ದು, ಅದರಲ್ಲಿ ಬೆರಳೆಣಿಕೆಯಷ್ಟೆ ಯುವಕರು ಸ್ವರ್ಣ ಪದಕ ಪಡೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಪದವಿಗಳನ್ನು ನ್ಯಾಕ್ ನಿರ್ದೇಶಕರಾದ ಎಸ್.ಸಿ.ಶರ್ಮಾ ಪ್ರದಾನ ಮಾಡಿದರು. ಈ ವೇಳೆ ವಿವಿಯ ಕುಲಪತಿ ಪ್ರೊ. ಜೋಗನ್ ಶಂಕರ್, ರಿಜಿಸ್ಟ್ರಾರ್ ಭೋಜಾನಾಯ್ಕ, ಪರೀಕ್ಷಾಂಗ ಕುಲಪತಿ ರಾಜಾನಾಯ್ಕ ಸೇರಿದಂತೆ ಇತರರು ಹಾಜರಿದ್ದರು.