ಶಿವಮೊಗ್ಗ : ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾನ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. 80 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರಿಗೆ ಚುನಾವಣಾ ಆಯೋಗವು ಈ ಬಾರಿ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ ನೀಡಿದೆ. ಈ ಮೂಲಕ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶವನ್ನು ಆಯೋಗ ಹೊಂದಿದೆ. ಇದಕ್ಕಾಗಿ ಚುನಾವಣಾ ಆಯೋಗವು ತಮ್ಮ ಅಧಿಕಾರಿಗಳನ್ನು 80 ವರ್ಷ ಮೇಲ್ಟಟ್ಟ ಮತದಾರರ ಮನೆಗೆ ಕಳುಹಿಸುತ್ತಿದೆ. ಹೀಗೆ ಮತದಾರರ ಮನೆಗಳಿಗೆ ಹೋದ ಅಧಿಕಾರಿಗಳು ಮತದಾನ ಮಾಡಿಸಿಕೊಂಡು ಬರುತ್ತಿದ್ದಾರೆ.
ಮನೆಯಲ್ಲಿಯೇ ಮತಗಟ್ಟೆ ಸ್ಥಾಪಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಒಂದನೇ ಮತಗಟ್ಟೆ ಅಧಿಕಾರಿ, ಎರಡನೇ ಮತಗಟ್ಟೆ ಅಧಿಕಾರಿ, ಒಬ್ಬರು ಮೈಕ್ರೋ ಅಬ್ಸರ್ವರ್, ಒಬ್ಬರು ಕ್ಯಾಮರಾಮನ್ ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸ್ಥಳೀಯವಾಗಿ ಬಿಎಲ್ ಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸಹಕಾರ ಮಾಡಲಿದ್ದಾರೆ.
ಇನ್ನು, ಮನೆಯಿಂದಲೇ ಜಿಲ್ಲೆಯ ಸೊರಬ ಪಟ್ಟಣದ ಚಿಕ್ಕಪೇಟೆ ನಿವಾಸಿ ಕೃಷ್ಣಭಟ್ ಗೋಖಲೆ ಮೊದಲು ಮತ ಚಲಾಯಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟವರು ಒಟ್ಟು 28,680 ಮತದಾರರು ಇದ್ದಾರೆ. ಇಂದಿನಿಂದ ಮತದಾನ ನಡೆಯುವ ತನಕ ಹಿರಿಯರ ಮತದಾನ ನಡೆಯಲಿದೆ.
‘ಮನೆ ಮತ’ ಜಿಲ್ಲೆಯಲ್ಲಿ ಶೇ.82.32ರಷ್ಟು ಸಾಧನೆ : ಶನಿವಾರದಿಂದ (ಎಪ್ರಿಲ್ 29) ಮನೆಯಿಂದಲೇ ಮತ ಚಲಾಯಿಸುವ ಅವಕಾಶ ನೀಡಿರುವ ಹಿನ್ನಲೆ ಜಿಲ್ಲೆಯಲ್ಲಿ ಮೊದಲನೇ ದಿನವೇ ಶೇ.82.32 ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ನೋಂದಾಯಿಸಿದ್ದ 80 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲರ ಒಟ್ಟು 2364 ಮತದಾರರ ಪೈಕಿ ಇಂದು ಪೋಸ್ಟಲ್ ಬ್ಯಾಲೆಟ್ ಮೂಲಕ 1946 ಮತಗಳನ್ನು ಚಲಾಯಿಸಲಾಗಿದೆ. ಇಂದಿನ 2206 ಮತ ಚಲಾವಣೆ ಗುರಿಯಲ್ಲಿ 1946 ಮತ ಚಲಾವಣೆಯಾಗಿದೆ.
ಇನ್ನು, ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 1894 ಮತದಾರರು ಮತ್ತು ಅಂಗವಿಕಲ 490 ಮತದಾರರು ಸೇರಿ ಒಟ್ಟು 2364 ಮತದಾರರು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ ಇಂದು ಮೊದಲನೇ ದಿನ 80 ವರ್ಷ ಮೇಲ್ಪಟ್ಟ 1585 ಮಂದಿ ಮತ್ತು ಅಂಗವಿಕಲ 361 ಮಂದಿ ಒಟ್ಟು 1946 ಮತದಾರರು ಮತ ಚಲಾವಣೆ ಮಾಡಿದ್ದಾರೆ. ಮೇ 6ರ ವರೆಗೆ ಮತದಾನ ನಡೆಯಲಿದೆ.
ಇದನ್ನೂ ಓದಿ : ಮತ ಚಲಾವಣೆಗೂ ಮುನ್ನ 8 ಮಂದಿ ನಿಧನ.. ಚಾಮರಾಜನಗರದಲ್ಲಿ 313 ಮಂದಿಯಿಂದ ಮನೆಯಲ್ಲೇ ಮತದಾನ