ಶಿವಮೊಗ್ಗ: ಶತಮಾನ ಕಂಡ ವಿಐಎಸ್ಎಲ್ ಕಾರ್ಖಾನೆಯನ್ನು ನಂಬಿಕೊಂಡು ಕಾಯಂ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಅಲ್ಲದೆ ಭದ್ರಾವತಿ ಪಟ್ಟಣವೇ ಇದೆ. ಇವರೆಲ್ಲ ಉಳಿಯಬೇಕಾದರೆ ಈ ಕಾರ್ಖಾನೆ ಉಳಿಯಬೇಕಿದೆ ಎಂದು ವಿಐಎಸ್ಎಲ್ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಹೇಳಿದ್ದಾರೆ.
ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನು ಉಳಿಸಲು ಭದ್ರಾವತಿ ತಾಲೂಕಿನ ಎಲ್ಲಾ ರಾಜಕೀಯ ಪಕ್ಷಗಳು ಸೇರಿ ಹೋರಾಟ ಸಮಿತಿಯನ್ನು ರಚಿಸಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಬಾಲಕೃಷ್ಣ, ನಷ್ಟ ತೋರಿಸಿ ಕಾರ್ಖಾನೆಯನ್ನು ಮಾರಾಟ ಮಾಡುವ ಹುನ್ನಾರ ನಡೆಸಲಾಗುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಐಎಸ್ಎಲ್ಅನ್ನು ಖಾಸಗೀಕರಣ ಮಾಡುವ ಹಾಗೂ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸುವುದು, ಕಾರ್ಖಾನೆಯ ಕ್ವಾಟ್ರಸ್ಗಳಲ್ಲಿ ಲೀಸ್ ಮೇಲೆ ಇರುವವರನ್ನು ಒಕ್ಕಲೆಬ್ಬಿಸುವುದನ್ನು ತಡೆಯುವುದು ಹಾಗೂ ಗುತ್ತಿಗೆ ಕಾರ್ಮಿಕರನ್ನು ರಕ್ಷಿಸುವುದು ಹೀಗೆ ಹಲವು ಗುರಿಗಳನ್ನು ಇಟ್ಟುಕೊಂಡು ಹೋರಾಟ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯಲ್ಲಿ ಕಾರ್ಮಿಕರ ಸಂಘಟನೆ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಆಮ್ ಅದ್ಮಿ ಪಕ್ಷ ಹಾಗೂ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದರು.
ಕಾರ್ಖಾನೆ ಉಳಿಸುವುದು ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರ ಕೈಯಲ್ಲಿದೆ. ಅವರು ಕಾರ್ಖಾನೆ ಖಾಸಗೀಕರಣಕ್ಕೆ ಒಲವು ತೋರುತ್ತಿದ್ದಾರೆ. ಇದು ಸರಿಯಲ್ಲ. ಖಾಸಗಿಯವರು ತೆಗೆದುಕೊಂಡ್ರೆ ಅವರು ಎಷ್ಟು ಜನ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಕಳೆದ ಚುನಾವಣೆಯಲ್ಲಿ ಹಾಲಿ ಸಿಎಂ ಯಡಿಯೂರಪ್ಪ, ಹಾಲಿ ಸಂಸದ ರಾಘವೇಂದ್ರ ಅವರು ಕಾರ್ಖಾನೆ ಖಾಸಗೀಕರಣ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ರು. ಕಾರ್ಖಾನೆಗೆ ಗಣಿ ಮಂಜೂರು ಮಾಡಿದ್ರು ಸಹ ಕಾರ್ಖಾನೆಯನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.