ಶಿವಮೊಗ್ಗ: ಶೃಂಗೇರಿಯ ಆದಿ ಶಂಕರಾಚಾರ್ಯರ ಪ್ರತಿಮೆಯ ಸ್ಥಳದಲ್ಲಿ ಎಸ್ಡಿಪಿಐ ಬಾವುಟ ಹಾಕಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಪ್ರ ಯುವ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶ್ರೀಕ್ಷೇತ್ರ ಶೃಂಗೇರಿಯ ಶಂಕರಾಚಾರ್ಯರ ವೃತ್ತದಲ್ಲಿರುವ ಆದಿ ಶಂಕರಾಚಾರ್ಯರ ಪ್ರತಿಮೆ ಸ್ಥಳದಲ್ಲಿ ಎಸ್ಡಿಪಿಐ ಸಂಘಟನೆಯ ಬಾವುಟ ಹಾಕುವ ಮೂಲಕ ಸಮಾಜದ ಶಾಂತಿಯನ್ನು ಹಾಳು ಮಾಡಲು ಕೆಲವು ಕಿಡಿಗೇಡಿಗಳು ಯತ್ನಿಸಿದ್ದಾರೆ. ಶಾಂತಿಯಿಂದ ಕೂಡಿರುವ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ದುರುದ್ದೇಶ ಇದಾಗಿದ್ದು, ಇಂಥಹ ಕೃತ್ಯ ಎಸಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ವಿಪ್ರ ಯುವ ಪರಿಷತ್ ಆಗ್ರಹಿಸಿತು.
ಪವಿತ್ರ ಕ್ಷೇತ್ರವಾದ ಶೃಂಗೇರಿಯಲ್ಲಿ ಇಂತಹ ಘಟನೆ ನಡೆದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದ್ದು, ಆದಿ ಶಂಕರಾಚಾರ್ಯರ ಪ್ರತಿಮೆ ಸ್ಥಳದಲ್ಲಿ ಎಸ್ಡಿಪಿಐ ಬಾವುಟ ಹಾಕಿದವರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.