ಶಿವಮೊಗ್ಗ: ರಾಜ್ಯ ಬಿಜೆಪಿ ಯುವ ಮೊರ್ಚಾ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ತಮ್ಮ ಸಹೋದರ ಬಿ.ವೈ.ರಾಘವೇಂದ್ರ ಪರ ನಗರದಲ್ಲಿ ಪ್ರಚಾರ ನಡೆಸಿದರು.
ನೆಹರು ಕ್ರೀಡಾಂಗಣದಲ್ಲಿ ವಾಕಿಂಗ್ ಮಾಡುವವರ ಬಳಿ ತಮ್ಮ ಸಹೋದರನಿಗೆ ಮತ ಹಾಕುವಂತೆ ಮನವಿ ಮಾಡಿಕೊಂಡರು. ಬೆಳ್ಳಂಬೆಳಗ್ಗೆ ವಾಕಿಂಗ್ಗೆ ಬಂದಿದ್ದವರ ಬಳಿ ತೆರಳಿ ಜಿಲ್ಲೆ ಹಾಗೂ ದೇಶದ ಅಭಿವೃದ್ಧಿಗೆ ಬಿಜೆಪಿಗೆ ಮತ ಹಾಕುವಂತೆ ವಿನಂತಿ ಮಾಡಿಕೊಂಡರು.
ವಾಕಿಂಗ್ಗೆ ಬಂದಿದ್ದ ಎಲ್ಲಾ ವಯೋಮಾನದವರನ್ನು ಭೇಟಿ ಮಾಡಿ ಮತಯಾಚಿಸಿದರು. ನಂತರ ಒಳಂಗಾಣ ಕ್ರೀಡಾಂಗಣದಲ್ಲಿ ಆಟವಾಡುತ್ತಿದ್ದವರ ಬಳಿ ಹೋಗಿ ಬಿಜೆಪಿಯ ಗುರುತಿಗೆ ಮತ ಹಾಕುವ ಜೊತೆಗೆ ನಿಮ್ಮ ಕಡೆಯವರ ಮತಗಳನ್ನು ಬಿಜೆಪಿಗೆ ಹಾಕಿಸುವಂತೆ ವಿನಂತಿ ಮಾಡಿದರು. ನಂತರ ಕ್ರೀಡಾಂಗಣದ ಜಿಮ್ಗೆ ಹೋಗಿ ಕಸರತ್ತು ನಡೆಸುತ್ತಿದ್ದ ಯುವಕರನ್ನು ಭೇಟಿ ಮಾಡಿ ತಮ್ಮ ಸಹೋದರನಿಗೆ ಮತ ನೀಡುವಂತೆ ಕೇಳಿದರು.
ಈ ವೇಳೆ ಮಾತನಾಡಿದ ಅವರು, ದೇಶದಲ್ಲೆಡೆ ಬಿಜೆಪಿಯ ಗಾಳಿ ಬೀಸುತ್ತಿದೆ. ಅದೇ ರೀತಿ ಶಿವಮೊಗ್ಗದಲ್ಲೂ ಬಿಜೆಪಿಯ ಗಾಳಿ ಬೀಸುತ್ತಿದೆ. ಸಿಎಂ ಆಗಿದ್ದಾಗ ಯಡಿಯೂರಪ್ಪನವರು ಜಿಲ್ಲೆಯನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅದೇ ರೀತಿ ರಾಘವೇಂದ್ರ ಉಪ ಚುನಾವಣೆಯ ನಂತರ ಜನ್ಶತಾಬ್ದಿ ರೈಲು ಸಂಚಾರ, ಇಎಸ್ಐ ಆಸ್ಪತ್ರೆ ಶಂಕುಸ್ಥಾಪನೆ ಸೇರಿದಂತೆ ಹಲವು ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ. ಇದರಿಂದ ಜಿಲ್ಲೆಯ ಜನ ಈ ಬಾರಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.