ಶಿವಮೊಗ್ಗ: ಇಷ್ಟು ದಿನ ಕೊರೊನ ಲಾಕ್ ಡೌನ್ನಿಂದಾಗಿ ದುಡಿಮೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದ ಜನ ಸಾಮಾನ್ಯರಿಗೆ ಮತ್ತೆ ತರಕಾರಿಗಳ ಬೆಲೆ ಏರಿಕೆ ಬಿಸಿ ತಟ್ಟಿದೆ.
ರಾಜ್ಯದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳೆಲ್ಲವೂ ಪ್ರವಾಹಕ್ಕೆ ಸಿಲುಕಿ ಹಾಳಾಗಿದೆ. ಹಾಗಾಗಿ ದಿನನಿತ್ಯದ ಬದುಕಿನ ಭಾಗವಾಗಿದ್ದ ತರಕಾರಿಗಳ ಬೆಲೆ ದಿಢೀರನೇ ಗಗನಕ್ಕೇರಿದೆ. ಕಳೆದ ತಿಂಗಳು ಇದ್ದ ಬೆಲೆಗೂ ಈಗಿರುವ ತರಕಾರಿ ಬೆಲೆಗೂ ಸಾಕಷ್ಟು ಏರಿಕೆ ಕಂಡಿದೆ.
ಅದರಲ್ಲೂ ಕಳೆದ ಹದಿನೈದು ದಿನಗಳ ಹಿಂದೆ ಇಪ್ಪತ್ತು ರೂ. ಗೆ ಕೆಜಿ ಇದ್ದ ಈರುಳ್ಳಿ ಈಗ ನೂರರ ಗಡಿದಾಟಿದೆ. ಇದರಿಂದಾಗಿ ಗ್ರಾಹಕರು ಬೆಲೆ ಏರಿಕೆ ಬಿಸಿ ಅನುಭವಿಸುತ್ತಿದ್ದರೆ, ರೈತ ತಾನು ಬೆಳೆದ ಬೆಳೆ ಕೈಗೆ ಸಿಗದೇ ಹಾಳಾಯಿತು ಎನ್ನುವ ಪರಿಸ್ಥಿತಿಯಲ್ಲಿದ್ದಾನೆ.
ಮಳೆ ಬಂದಿರುವುದರಿಂದ ಎಲ್ಲಾ ತರಕಾರಿ ಬೆಲೆಗಳು ಜಾಸ್ತಿ ಆಗಿದೆ. ಬೆಲೆ ಹೆಚ್ಚು ಕೊಟ್ಟರೂ ಒಳ್ಳೆ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ, ಎಲ್ಲಾ ಮಳೆಗೆ ಹಾಳಾಗಿವೆ. ಹಾಗಾಗಿ ಇನ್ನೂ ಕೆಲ ದಿನಗಳ ಕಾಲ ತರಕಾರಿ ಬೆಲೆ ಹೀಗೇ ಮುಂದುವರಿಯಲಿದೆ ಎಂದು ತರಕಾರಿ ವ್ಯಾಪಾರಸ್ಥರು ತಿಳಿಸಿದ್ದಾರೆ.
ಇನ್ನೂ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ದಿಢೀರನೇ ಗಗನಕ್ಕೇರಿದ್ದು, ಈರುಳ್ಳಿ ನೂರು ರೂಗಿಂತ ಹೆಚ್ಚಿದ್ದರೆ, ಮೆಣಸಿನಕಾಯಿ 80, ಕ್ಯಾರೇಟ್ 80, ಬೀನ್ಸ್ 70, ಟೊಮ್ಯಾಟೊ 30 , ಬದನೆಕಾಯಿ 60, ಸೌತೆಕಾಯಿ 40, ಆಲೂಗಡ್ಡೆ 60, ಬೀಟ್ರೂಟ್ 60, ಎಲೆಕೋಸು 50 ರೂ. ಹೀಗೆ ಪ್ರತಿಯೊಂದು ತರಕಾರಿಯ ಬೆಲೆ ಏರಿಕೆಯಾಗಿದೆ.
ಮೊದಲೇ ಕೊರೊನಾ ಸಂಕಷ್ಟದಿಂದ ದುಡಿಮೆ ಇಲ್ಲದೇ ಕಂಗಾಲಾಗಿದ್ದ ಜನಸಾಮಾನ್ಯರಿಗೆ ಮತ್ತೆ ಗಗನಕ್ಕೇರೆರಿರುವ ತರಕಾರಿ ಬೆಲೆಯಿಂದಾಗಿ ಸಾಕಷ್ಟು ತೊಂದರೆಯಾಗಿದೆ. ಅದರಲ್ಲೂ ಹಬ್ಬ ಹರಿದಿನಗಳು ಬಂದಿವೆ, ಅದರ ಮಧ್ಯೆ ಬೆಲೆ ಏರಿಕೆ ಬಿಸಿ. ಈ ಎಲ್ಲಾ ಹೊರೆ ಜನಸಾಮಾನ್ಯರ ಮೇಲೆ ಬಿದ್ದಿದೆ.