ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಪ್ರತಿ ವರ್ಷವೂ ಕಾಣಿಸಿಕೊಳ್ಳುವ ಮಂಗನ ಕಾಯಿಲೆ ಎಂಬ ಮಹಾಮಾರಿಗೆ ಹತ್ತಾರು ಮಂದಿ ಪ್ರಾಣತೆರುತ್ತಲೇ ಇದ್ದಾರೆ. ಹೀಗಾಗಿ ಇದುವರೆಗೂ ಲಸಿಕೆಯೇ ದೊರಕದ ಮಂಗನ ಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.
ಕಳೆದ ಕೆಲ ವರ್ಷಗಳಿಂದ ಮಲೆನಾಡಿನಲ್ಲಿ ಮಂಗನಕಾಯಿಲೆ ನಿರೀಕ್ಷೆಗೂ ಮೀರಿ ಹೆಚ್ಚುತ್ತಿದೆ. ಇದೇ ಕಾರಣದಿಂದ ಆರೋಗ್ಯ ಇಲಾಖೆ ಈ ವರ್ಷ ಅವಧಿಗೂ ಮೊದಲಿನಿಂದಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಈ ವರ್ಷವೂ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ತಿಂಗಳಿನಲ್ಲೇ ಮಂಗನ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದೇ ಕಾರಣದಿಂದ ಆರೋಗ್ಯ ಇಲಾಖೆಯ ತಜ್ಞರು ಪ್ರತಿ ವರ್ಷದಂತೆ ಈ ವರ್ಷವೂ ಕಾಡುಗಳಲ್ಲಿ ಪರಿಶೀಲನೆ ನಡೆಸಿದಾಗ ಮಂಗನಕಾಯಿಲೆ ಹಬ್ಬಿಸುವ ಉಣ್ಣೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳವಣಿಗೆ ಆಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಉಣ್ಣೆಗಳಿಂದ ಮಂಗಗಳು ಮನುಷ್ಯನಿಗೆ ಈ ಕೆಎಫ್ಡಿ ರೋಗವನ್ನು ಹಬ್ಬಿಸುತ್ತವೆ.
ಹೀಗಾಗಿ ಸೆಪ್ಟೆಂಬರ್ ತಿಂಗಳಿನಿಂದಲೇ ಮಲೆನಾಡಿನಾದ್ಯಂತ ಎಲ್ಲ ಹಳ್ಳಿಗಳಲ್ಲಿಯೂ ಮಂಗನಕಾಯಿಲೆಗೆ ಲಸಿಕೆಯನ್ನು ಹಾಕಲಾಗುತ್ತಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ತಾಲೂಕಿನ ಹಲವು ಕೆಎಫ್ಡಿ ಬಾಧಿತ ಪ್ರದೇಶದಲ್ಲಿ ಲಸಿಕೆಯನ್ನು ಹಾಕಲಾಗುತ್ತಿದೆ. ಜೂನ್ ತಿಂಗಳಿನಿಂದಲೇ ಮಂಗನಕಾಯಿಲೆ ಕಾಣಿಸಿಕೊಳ್ಳುವ ಭಾಗದ ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಇದುವರೆಗೆ ಬರೋಬ್ಬರಿ 70 ಸಾವಿರ ವ್ಯಾಕ್ಸಿನ್ ನೀಡಲಾಗಿದೆ. ಇದೀಗ 30 ಸಾವಿರ ವ್ಯಾಕ್ಸಿನ್ ನೀಡಲಾಗುತ್ತಿದೆ. ಇದರ ಜೊತೆಗೆ 60 ಸಾವಿರ ವ್ಯಾಕ್ಸಿನ್ ಸಂಗ್ರಹಿಸಿಡಲಾಗಿದೆ. ಕಾಡಿಗೆ ಹೋಗುವ ಜನರಿಗೆ ಉಣ್ಣೆಗಳು ಕಚ್ಚಬಾರದು ಎಂದು ಅಗತ್ಯ ಡಿಎಂಪಿ ಆಯಿಲ್ ವಿತರಿಸಲಾಗಿದೆ. ಜೊತೆಗೆ ಇನ್ನಷ್ಟು ಡಿಎಂಪಿ ಆಯಿಲ್ ಸಂಗ್ರಹಿಸಿಡಲಾಗಿದ್ದು, ನಿರಂತರವಾಗಿ ಜನರಿಗೆ ಸರಬರಾಜು ಮಾಡಲಾಗುತ್ತದೆ.
ಇದರೊಂದಿಗೆ ಮಂಗಗಳು ಸಾವನ್ನಪ್ಪಿದ ಜಾಗದಿಂದ 50 ಅಡಿ ಸುತ್ತಳತೆಯಲ್ಲಿ ಮೆಲಾಥಿಯನ್ ಪುಡಿ ಸಿಂಪಡಿಸಲಾಗುತ್ತಿದೆ. ಈಗಾಗಲೇ 10 ಟನ್ ಮೆಲಾಥಿಯನ್ ಪುಡಿ ಸಂಗ್ರಹಿಸಿಡಲಾಗಿದೆ. ಈ ಬಾರಿ ಮಂಗನಕಾಯಿಲೆ ತಡೆಯುವ ಉದ್ದೇಶದಿಂದ ಆರೋಗ್ಯ ಇಲಾಖೆ ಈ ಎಲ್ಲ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ.