ಶಿವಮೊಗ್ಗ: ಶಿವಮೊಗ್ಗ - ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನಾಗರಾಜ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಶಿವಮೊಗ್ಗದ ವಿನೋಬನಗರದ ಕಚೇರಿಯಲ್ಲಿ ನಾಗರಾಜ್ ಅವರು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರ ಹಿಂಬಾಲಕ ಜ್ಯೋತಿ ಪ್ರಕಾಶ್ ಅವರು ಸೂಡಾದ ಅಧ್ಯಕ್ಷರಾಗಿದ್ದರು. ಈಗ ಈಶ್ವರಪ್ಪ ಅವರ ಬೆಂಬಲಿಗರಾದ ನಾಗರಾಜ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಮೊದಲ ಅವಧಿಯಲ್ಲಿಯೇ ನಾಗರಾಜ್ ಅಧ್ಯಕ್ಷರಾಗಬೇಕಿತ್ತು. ಆದರೆ, ಅಂದಿನ ರಾಜಕೀಯ ಬೆಳವಣಿಗೆಯಲ್ಲಿ ಜ್ಯೋತಿ ಪ್ರಕಾಶ್ ಅವರು ಅಧ್ಯಕ್ಷರಾಗಿದ್ದರು.
ಕಚೇರಿಯಲ್ಲಿ ಪೂಜಾ ಕಾರ್ಯಕ್ರಮದ ನಂತರ ಬಹಿರಂಗ ಸಮಾರಂಭ ನಡೆಸಲಾಯಿತು. ಈ ವೇಳೆ ಸಂಸದ ಬಿ. ವೈ ರಾಘವೇಂದ್ರ ಸೇರಿದಂತೆ ಬಿಜೆಪಿ ಮುಖಂಡರು ನಾಗರಾಜ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ನಂತರ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಹಿಂದಿನ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್ ಅವರು ಉತ್ತಮವಾಗಿ ತಮ್ಮ ಅಧಿಕಾರವನ್ನು ನಡೆಸಿದ್ದಾರೆ. ಸೂಡಾದ ಸೈಟು ಹಂಚಿಕೆ ವಿಚಾರದಲ್ಲಿ ಲೋಕಾಯುಕ್ತದಲ್ಲಿದ್ದ ಕೇಸುಗಳನ್ನು ಪರಿಹರಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ. ಈಗಾಗಲೇ ನಗರವ್ಯಾಪ್ತಿಯ ಪಾರ್ಕ್ಗಳು ಅಭಿವೃದ್ಧಿಯಾಗುತ್ತಿವೆ. ಮುಂದೆಯೂ ಸಹ ಅಭಿವೃದ್ಧಿ ಮಾಡಲಾಗುವುದು. ನಾಗರಾಜ್ ಅವರು ಸಹ ಉತ್ತಮ ಆಡಳಿತ ನಡೆಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಓದಿ: ಮಾವೋವಾದಿ ನಾಯಕನ ಬಂಧನದ ವಿರುದ್ಧ ಪ್ರತಿಭಟನೆ : ಬ್ರಿಡ್ಜ್ ಸ್ಫೋಟಗೊಳಿದ ನಕ್ಸಲರು