ಶಿವಮೊಗ್ಗ: ತಂದೆಯಿಂದ ಯೋಗ ಕಲಿತ ಇಬ್ಬರು ಪುತ್ರಿಯರು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಸಾಗರ ತಾಲೂಕಿನ ಭೈರಾಪುರ ಗ್ರಾಮದ ಆಯುರ್ವೇದ ಪಂಡಿತರಾದ ಗೋಪಾಲ ಹಾಗೂ ಗಂಗಮ್ಮ ದಂಪತಿಯ ಪುತ್ರಿಯರಾದ ಪೂಜಾ ಹಾಗೂ ಅಪೂರ್ವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗಾಸನವನ್ನ ಹರಡುತ್ತಿದ್ದಾರೆ.
ಗೋಪಾಲ ಅವರು ಯೋಗಪಟುಗಳಾಗಿದ್ದು, ತಮ್ಮ ಮೂವರು ಮಕ್ಕಳಿಗೆ ಯೋಗವನ್ನು ಕಲಿಸಿಕೊಟ್ಟಿದ್ದಾರೆ. ತಂದೆ ಹೇಳಿ ಕೊಟ್ಟ ವಿದ್ಯೆಯಿಂದ ಈ ಸಹೋದರಿಯರಿಬ್ಬರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪೂಜಾ ಚೀನಾದಲ್ಲಿ ಯೋಗ ಕಲಿಸುತ್ತಿದ್ದು, ಈಗ ವಿಯಟ್ನಾಂನಲ್ಲಿ ಯೋಗ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇನ್ನು ಪೂಜಾ ಸಹೋದರಿ ಅಪೂರ್ವ ಸಹ ಇದೇ ತಿಂಗಳು 25 ಮತ್ತು 26ರಂದು ಥೈಲ್ಯಾಂಡ್ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಅಪೂರ್ವ, ದೇಶ-ವಿದೇಶಗಳಲ್ಲಿ ನಡೆದ ವಿವಿಧ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಥೈಲ್ಯಾಂಡ್ನ ಪಟ್ಟಾಯ ನಗರದಲ್ಲಿ ನಡೆಯುವ ಯೋಗ ಸ್ಪರ್ಧೆಯಲ್ಲಿ ಭಾಗಹಿಸಿ ಭಾರತಕ್ಕೆ ಪದಕ ತರುವ ಹುಮ್ಮಸ್ಸಿನಲ್ಲಿದ್ದಾರೆ. ಇವರ ಸಹೋದರ ಶಂಶಾಕ ಸಹ ಯೋಗ ಅಭ್ಯಾಸ ಮಾಡುತ್ತಿದ್ದು, ಮುಂದೆ ದೇಶವನ್ನು ಪ್ರತಿನಿಧಿಸುವ ಬಯಕೆ ಹೊಂದಿದ್ದಾರೆ.
ಯೋಗವನ್ನು ಕೇವಲ ಅನಾರೋಗ್ಯಕ್ಕೆ ಒಳಗಾದವರು, ವಯಸ್ಸಾದವರು ಮಾತ್ರ ಮಾಡಬೇಕು ಎಂಬ ತಪ್ಪು ಕಲ್ಪನೆ ಇದೆ. ಆದ್ರೆ ಯೋಗವನ್ನ ನಮ್ಮ ದೇಹಾರೋಗ್ಯ ಕಾಪಾಡಿಕೊಳ್ಳಲು ಎಲ್ಲಾ ವಯೋಮಾನದವರು ಕಲಿತು ಮಾಡಬಹುದು. ಯೋಗದಲ್ಲಿ 73 ಸಾವಿರ ಆಸನಗಳಿವೆ. ಪ್ರತಿಯೊಂದು ರೋಗಕ್ಕೂ ಸಹ ಒಂದು ಯೋಗವಿದೆ. ಇದರಿಂದ ಯೋಗ ಕಲಿತರೆ ಆಸ್ಪತ್ರೆಯಿಂದ ದೂರವಿರಬಹುದಾಗಿದೆ. ವಿದೇಶಗಳಲ್ಲಿ ಯೋಗದ ಬಗ್ಗೆ ಸಾಕಷ್ಟು ಪ್ರಚಾರ ಹಾಗೂ ಜಾಗೃತಿ ಹೊಂದಿದ್ದಾರೆ. ನಮ್ಮ ದೇಶದಲ್ಲಿ ಎಲ್ಲರೂ ಯೋಗ ಕಲಿತು ರೋಗದಿಂದ ಮುಕ್ತಿ ಹೊಂದಬೇಕು ಎಂಬುದು ಇವರ ಆಶಯವಾಗಿದೆ.