ಶಿವಮೊಗ್ಗ : ನಗರದ ಮುಖ್ಯ ರೈಲು ನಿಲ್ದಾಣದ ಪಾರ್ಕಿಂಗ್ ಸ್ಥಳದ ಬಳಿ ಎರಡು ಅನುಮಾನಾಸ್ಪದ ಬಾಕ್ಸ್ಗಳು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆಂತಕ ಉಂಟು ಮಾಡಿದೆ. ಪತ್ತೆಯಾದ ಎರಡು ಬಾಕ್ಸ್ಗಳು ನಿನ್ನೆಯಿಂದಲೂ ಅದೇ ಜಾಗದಲ್ಲಿದ್ದು, ಇಂದು ಆಟೋ ಚಾಲಕರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಯನಗರ ಠಾಣೆ ಪೊಲೀಸರು ಬಾಕ್ಸ್ ಪರಿಶೀಲನೆಗೆ ಶ್ವಾನದಳ ಹಾಗೂ ಬಾಂಬ್ ಸ್ಕ್ವಾಡ್ ಅನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದಾರೆ. ಇದುವರೆಗೂ ಬಾಕ್ಸ್ನಲ್ಲಿ ಏನಿದೆ ಎಂದು ತಿಳಿಯದೇ ಇರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಬಾಕ್ಸ್ ಮೇಲೆ ಫುಡ್ ಗ್ರೈನ್ಸ್ ಅಂಡ್ ಶುಗರ್ಸ್ ಎಂದು ಬರೆಯಲಾಗಿದೆ. ಈ ಬಾಕ್ಸ್ ಅನ್ನು ಯಾರು ಇಲ್ಲಿಗೆ ತಂದು, ಯಾವಾಗ ಹಾಕಿದ್ರು ಅಂತ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಸದ್ಯ ಪೊಲೀಸರು ಬಾಕ್ಸ್ಗಳು ದೊರೆತಿರುವ ಸುಮಾರು 200 ಮೀಟರ್ನಷ್ಟು ದೂರದವರೆಗೆ ಎರಡೂ ಭಾಗದಲ್ಲಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಸಂಚಾರ ಬಂದ್ ಮಾಡಿದ್ದಾರೆ. ಸಂಚಾರಿ ಪೊಲೀಸರು ವಾಹನ ಸಂಚಾರಕ್ಕೆ ಬೇರೆ ಮಾರ್ಗದಲ್ಲಿ ಅನುಕೂಲ ಮಾಡಿಕೊಟ್ಟಿದ್ದಾರೆ. ಬಾಕ್ಸ್ ಬಗ್ಗೆ ಅನುಮಾನ ಹೆಚ್ಚಾಗಿರುವ ಕಾರಣ ಅದರಲ್ಲಿರುವ ವಸ್ತು ಏನೆಂಬುದನ್ನು ಪತ್ತೆ ಹಚ್ಚಲು ಬೆಂಗಳೂರಿನಿಂದ ವಿಶೇಷ ತಂಡ ಕರೆಯಿಸಲಾಗುತ್ತಿದೆ. ಬೆಂಗಳೂರಿನಿಂದ ತಂಡ ಸಂಜೆ ವೇಳೆಗೆ ಶಿವಮೊಗ್ಗ ತಲುಪುವ ಸಾಧ್ಯತೆ ಇದೆ.
ಸ್ಥಳಕ್ಕೆ ಶಾಸಕ ಚನ್ನಬಸಪ್ಪ ಭೇಟಿ: ಬಾಕ್ಸ್ ಪತ್ತೆಯಾದ ಸ್ಥಳಕ್ಕೆ ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚನ್ನಬಸಪ್ಪ ಅವರು ಭೇಟಿ ನೀಡಿ, ಪೊಲೀಸರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಾಕ್ಸ್ ಸುತ್ತಲೂ ಪೊಲೀಸರು ಮರಳಿನ ಚೀಲ ಹಾಕಿದ್ದಾರೆ.