ಶಿವಮೊಗ್ಗ: ಹಣಗೆರೆ ಅಭಯಾರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಗಳ ಕಡಿತಲೆ ಮಾಡಿದ್ದ ಇಬ್ಬರನ್ನು ಬಂಧಿಸಿ ಅವರಿಂದ 3.50 ಲಕ್ಷ ರೂ. ಮೌಲ್ಯದ ಮರಗಳನ್ನು ಶಿವಮೊಗ್ಗ ವಲಯ ವನ್ಯಜೀವಿ ವಿಭಾಗಾಧಿಕಾರಿಗಳು ವಶಕ್ಕೆ ಪಡೆದು ಕೊಂಡಿದ್ದಾರೆ. ಹಣಗೆರೆ ಅರಣ್ಯ ಪ್ರದೇಶವು ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಗೆ ಬರುತ್ತದೆ.
ಶಿವಮೊಗ್ಗ ತಾಲೂಕಿನ ಆಡಿನಕೊಟ್ಟಿಗೆ ಗ್ರಾಮದ ಬಳಿಯ ರಸ್ತೆ ಪಕ್ಕದಲ್ಲಿನ ಅರಣ್ಯ ಪ್ರದೇಶದ ಮರಗಳನ್ನು ಕಡಿಯಲಾಗಿತ್ತು. ಆಡಿನಕೊಟ್ಟಿಗೆ ಬಳಿ ಕಡಿತಲೆ ಮಾಡಿದ ಮರಗಳನ್ನು ಸಾಗರ ಪಟ್ಟಣಕ್ಕೆ ರವಾನೆ ಮಾಡಿ, ಅಲ್ಲಿನ ಸಾಮಿಲ್ನಲ್ಲಿ ಮರಗಳನ್ನು ನಾಟವನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಸಾಗರದ ಸಾಮಿಲ್ನಿಂದ ಶಿವಮೊಗ್ಗದ ವೆಂಕಟೇಶ್ ನಗರದ ಕಾಶಿನಾಥ್ ಕಲಾಮಂದಿರದಲ್ಲಿ ಸಂಗ್ರಹಿಸಲಾಗಿತ್ತು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಣಗೆರೆಕಟ್ಟೆ ಅರಣ್ಯ ವಿಭಾಗದ ಆರ್ಎಫ್ಓ ಜಗದೀಶ್ ಅವರು ತಮ್ಮ ತಂಡದೊಂದಿಗೆ ದಾಳಿ ನಡೆಸಿ ಮರ ಹಾಗೂ ಸಂಗ್ರಹಿಸಿಟ್ಟಿದ್ದ ರೇವಣಪ್ಪ ಹಾಗೂ ನಿಂಗೋಜಿರಾವ್ ಎಂಬುವರನ್ನು ಬಂಧಿಸಲಾಗಿದೆ. ನಾಗರಾಜ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ನಾಗರಾಜ್ ಮರಗಳ್ಳನಾಗಿದ್ದು, ಈತ ಮರಗಳನ್ನು ಕಡಿದು ಸಾಗಿಸಿ, ನಾಟವನ್ನಾಗಿ ಮಾಡಿದ್ದಾನೆ.
ನಾಗರಾಜ್ಗೆ ಅರಣ್ಯ ಇಲಾಖೆಯ ಸಹಾಯವಿಲ್ಲದೇ ಈ ಕೃತ್ಯ ಮಾಡಲು ಆಗುವುದಿಲ್ಲ ಎಂದು ತಿಳಿದಿರುವ ವನ್ಯಜೀವಿ ವಿಭಾಗದ ಡಿಎಫ್ಓ ಐ. ಎಂ ನಾಗರಾಜ್ ತಮ್ಮ ಸಿಬ್ಬಂದಿ ಮೇಲೆಯೂ ಹದ್ದಿನ ಕಣ್ಣಿಟ್ಟಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಇಂದು ಕೇವಲ ಮರವನ್ನು ಕಡಿತಲೆ ಮಾಡಿದಕ್ಕೆ ಮಾತ್ರವಲ್ಲ ಮರಕಡಿತಲೆ ಮಾಡಿದ್ದರಿಂದ ಪರಿಸರಕ್ಕೆ ಆಗುವ ನಷ್ಟವನ್ನು ಪರಿಗಣಿಸಲಾಗುವುದು ಎಂದು ವನ್ಯಜೀವಿ ವಿಭಾಗದ ಡಿಎಫ್ಓ ಐ. ಎಂ ನಾಗರಾಜ್ ತಿಳಿಸಿದ್ದಾರೆ.