ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಸಂಚಾರ ದಟ್ಟಣೆ, ಮಾಲಿನ್ಯ ನಿಯಂತ್ರಣ ಹಾಗೂ ಆಕಸ್ಮಿಕ ಅಪಘಾತಗಳು ಹೆಚ್ಚುತ್ತಿವೆ. ಹಾಗಾಗಿ, ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಟರ್ಮಿನಲ್ಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ ಬೆಂಗಳೂರು, ಮೈಸೂರು ಸೇರಿದಂತೆ ನಾಲ್ಕು ಕಡೆ ಸುಸಜ್ಜಿತ ಟ್ರಕ್ ಟರ್ಮಿನಲ್ಗಳನ್ನು ನಿರ್ಮಿಸಿ, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗಿದೆ.
ಅಷ್ಟೇ ಅಲ್ಲ, ರಾಜ್ಯದ ಹಲವೆಡೆ ಟರ್ಮಿನಲ್ ನಿರ್ಮಾಣಕ್ಕೆ ಸ್ಥಳಗಳನ್ನು ಗುರುತಿಸಲಾಗಿದೆ. ಅದರಂತೆ ಈಗ ಶಿವಮೊಗ್ಗದಲ್ಲಿ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಕೆಲವೇ ದಿನಗಳಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣವಾಗಲಿದೆ.
ಟ್ರಕ್ ಟರ್ಮಿನಲ್ ನಿರ್ಮಿಸುವ ಉದ್ದೇಶಕ್ಕಾಗಿ ನಗರಕ್ಕೆ ಹೊಂದಿಕೊಂಡಂತೆ 25-30 ಎಕರೆ ಜಾಗದ ಅವಶ್ಯಕತೆ ಇದ್ದು, ಸ್ಥಳ ಗುರುತಿಸಲಾಗುತ್ತಿದೆ. ಟರ್ಮಿನಲ್ನಲ್ಲಿ ವಾಹನಗಳ ಮಾಲೀಕರಿಂದ ಕೇವಲ ಕರ ವಸೂಲು ಮಾಡುವುದು ಮಾತ್ರವಲ್ಲದೇ, ವಾಹನ ಚಾಲಕರ ವಿಶ್ರಾಂತಿ ಕೊಠಡಿ, ವೇಬ್ರಿಡ್ಜ್, ಶೌಚಾಲಯ, ಪೆಟ್ರೋಲ್ ಬಂಕ್, ಮೆಡಿಕಲ್, ಲಾಜಿಸ್ಟಿಕ್ ಸೆಂಟರ್, ಥಿಯೇಟರ್ ಇತ್ಯಾದಿ ಸೌಲಭ್ಯಗಳನ್ನು ನೀಡಲಾಗುತ್ತದೆ.
ಟ್ರಕ್ ಟರ್ಮಿನಲ್ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಗಳು ಸಹ ನಡೆದಿವೆ. ಹಾಗಾಗಿ, ಆದಷ್ಟು ಬೇಗ ಟ್ರಕ್ ಟರ್ಮಿನಲ್ ನಿರ್ಮಾಣವಾಗಿ ಜಿಲ್ಲೆಯಲ್ಲಿ ವಾಹನ ದಟ್ಟಣೆ ಕಡಿಮೆ ಆಗಲಿ ಎನ್ನುವುದೇ ಎಲ್ಲರ ಆಶಯವಾಗಿದೆ.
ಇದನ್ನೂ ಓದಿ: ಪ್ರೀತ್ಸೆ ಅಂತಾ ಕಾಡಿದ್ದ ಪಾತಕಿ, ಆಕೆ ಒಪ್ಪದಿದ್ದಾಗ ಕೊನೆಗೆ ಪ್ರಾಣವನ್ನೇ ತೆಗೆದ..