ಶಿವಮೊಗ್ಗ: ತಾಯಿಯಿಂದ ಬೇರ್ಪಟ್ಟ ಮರಿಯಾನೆಗೆ ಕಳೆದ ಮೂರು ದಿನಗಳಿಂದ ಶಿವಮೊಗ್ಗದ ಸಕ್ರೆಬೈಲಿನ ಆನೆ ಬಿಡಾರದಲ್ಲಿ ಆರೈಕೆ ಮಾಡಲಾಗುತ್ತಿದೆ. ಗಂಡು ಮರಿಯಾನೆಗೆ ಹೊಟ್ಟೆ, ಬೆನ್ನಿನ ಭಾಗಗಳಲ್ಲಿ ಗಾಯಗಳಾಗಿವೆ. ಹಾಗಾಗಿ ಮರಿಯಾನೆಯನ್ನ ತೀವ್ರ ನಿಗಾ ವಹಿಸಿ ಡಾ. ವಿನಯ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮರಿಯಾನೆ ದೊರೆತದ್ದು ಹೇಗೆ?
ಅಕ್ಟೋಬರ್ 28 ರಂದು ಹಾಸನ ಜಿಲ್ಲೆ ಸಕಲೇಶಪುರದ ಖಾಸಗಿ ಎಸ್ಟೇಟ್ ನಲ್ಲಿ ಕಾಡಾನೆಯ ಹಿಂಡು ದಾಳಿ ಮಾಡಿದೆ. ಈ ವೇಳೆ ಕಾಡಾನೆಯೊಂದು ಮರಿ ಹಾಕಿದೆ. ಈ ಮರಿಯಾನೆ ಒಂದು ದಿನವಾದರೂ ಸಹ ಮೇಲೆ ಏಳದ ಕಾರಣ ತಾಯಿಯಾನೆ ಮರಿಯನ್ನು ಮೇಲೇಳಿಸಲು ಸೊಂಡಿಲಲ್ಲಿ ನೂಕಾಡಿದೆ. ಈ ವೇಳೆ ಮರಿಯಾನೆಗೆ ಗಾಯಗಳಾಗಿವೆ. ಎರಡು ದಿನಗಳಾದರೂ ಮೇಲೇಳದ ಮರಿಯಾನೆಯನ್ನ ಬಿಟ್ಟು ತಾಯಿ ಆನೆ ಹಿಂಡಿನ ಜತೆ ಹೊರಟಿದೆ. ಮರಿಯಾನೆ ನರಳುತ್ತಿದ್ದ ವಿಷಯ ತಿಳಿದ ಅರಣ್ಯಾಧಿಕಾರಿಗಳು, ಅದನ್ನ ರಕ್ಷಿಸಿ ಸಕ್ರೆಬೈಲು ಆನೆ ಶಿಬಿರದಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿದರು.
ಚಿಕಿತ್ಸೆ ಹೇಗೆ ನಡೆಯುತ್ತಿದೆ?
ಇದು ತಾಯಿಯಿಂದ ಬೇರ್ಪಟ್ಟ ಮೂರು ದಿನದ ಮರಿಯಾನೆಯಾಗಿದೆ. ಇದರಿಂದ ಇದಕ್ಕೆ ಕನಿಷ್ಟ ಮೂರು ತಿಂಗಳು ಕೇವಲ ಹಾಲನ್ನಷ್ಟೆ ನೀಡಬೇಕಿದೆ. ಅದರಂತೆ ಗಂಟೆಗೊಂದು ಬಾರಿ ಲ್ಯಾಕ್ಟೋಜನ್ ಒನ್ಎಂಬ ಬೇಬಿ ಮಿಲ್ಕ್ ಪೌಡರ್ ಅನ್ನು ಬಿಸಿ ನೀರಲ್ಲಿ ಮಿಕ್ಸ್ ಮಾಡಿ ಕುಡಿಸಲಾಗುತ್ತಿದೆ. ಆನೆ ಮರಿಯು ನರದೌರ್ಬಲ್ಯ ಬಳಲುತ್ತಿದೆ. ಇದರ ಮುಂಭಾಗದ ಎರಡು ಕಾಲುಗಳು ಮಡಿಚಿವೆ. ಆನೆಗೆ ಮೇಲೆ ಏಳಲು ಆಗುವುದಿಲ್ಲ. ಬೆನ್ನು ಸಹ ಬಾಗಿರುವುದರಿಂದ ನಡೆದಾಡಲು ಕಷ್ಟವಾಗುತ್ತಿದೆ. ಹಾಗಾಗಿ ತಂಡವೊಂದನ್ನ ರಚಿಸಿ 24 ಗಂಟೆಗಳ ಕಾಲ ಮರಿಯಾನೆ ಆರೈಕೆ ಮಾಡಲಾಗ್ತಿದೆ.
ಈ ಹಿಂದೆಯೂ ಸಹ ಈ ರೀತಿ ಕಾಡಿನಲ್ಲಿ ತಾಯಿಯಿಂದ ಬೇರ್ಪಟ್ಟ ಮರಿಯಾನೆಯನ್ನು ಸಕ್ರೆಬೈಲಿನಲ್ಲಿ ಸಾಕಲಾಗಿದೆ. ಮರಿಯಾನೆಯ ಚಿಕಿತ್ಸೆಗಾಗಿಯೇ ಪ್ರತ್ಯೇಕ ಶೆಡ್ ನಿರ್ಮಾಣ ಮಾಡಲಾಗಿದೆ. ಆನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ ಎನ್ನುತ್ತಾರೆ ಆನೆ ಬಿಡಾರದ ವೈದ್ಯ ವಿನಯ್.
ಈ ಮರಿಯಾನೆ ಬಿಡಾರಕ್ಕೆ ಸೇರ್ಪಡೆಯಾಗಿರುವುದರಿಂದ ಸಕ್ರೆಬೈಲಿನ ಆನೆ ಬಿಡಾರದಲ್ಲಿ ಆನೆಗಳ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ.