ಶಿವಮೊಗ್ಗ: ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದನ್ನು ವಿರೋಧಿಸಿ ಇಂದಿನಿಂದ ಜಿಲ್ಲೆಯ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿನ ವ್ಯಾಪಾರ ವಹಿವಾಟುಗಳನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಲಾಗುವುದು ಎಂದು ಎಪಿಎಂಸಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಶಂಕರಪ್ಪ ತಿಳಿಸಿದರು.
ಕೇಂದ್ರದ ಸುಗ್ರೀವಾಜ್ಞೆಯಿಂದ ರೈತರು ತಮ್ಮ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ವ್ಯಾಪಾರಿಗಳು ಸಹ ಎಪಿಎಂಸಿಯಿಂದ ಹೊರಗೂ ಸಹ ವ್ಯಾಪಾರ ನಡೆಸಬಹುದು. ಇದರಿಂದಾಗಿ ರೈತರು ತಮ್ಮ ಬೆಳೆಯನ್ನು ಎಪಿಎಂಸಿಗೆ ತರುವುದಿಲ್ಲ. ಪರಿಣಾಮ ಇಲ್ಲಿ ವ್ಯಾಪಾರ ಆಗುವುದಿಲ್ಲ. ಇಲ್ಲಿನ ವ್ಯಾಪಾರಿಗಳು ಸಹ ಎಪಿಎಂಸಿಯಿಂದ ಹೊರಗೆ ಹೋಗಿ ಗೋದಾಮುಗಳನ್ನು ಮಾಡಿಕೊಂಡು ವ್ಯಾಪಾರ ನಡೆಸಲು ಪ್ರಾರಂಭಿಸುತ್ತಾರೆ. ಇದರಿಂದ ಮುಂದಿನ ದಿನಗಳಲ್ಲಿ ಎಪಿಎಂಸಿ ಮುಚ್ಚುವ ಪರಿಸ್ಥಿತಿ ಎದುರಾಗಬಹುದು ಎಂದು ಕಳವಳ ವ್ಯಕ್ತಪಟಿಸಿದರು.
ಸುಗ್ರೀವಾಜ್ಞೆಯಿಂದ ಎಪಿಎಂಸಿ ಹೊರಗೆ ವ್ಯಾಪಾರ ಮಾಡುವವರು ಎಪಿಎಂಸಿಗೆ ಶುಲ್ಕ ಕಟ್ಟುವ ಹಾಗಿಲ್ಲ. ಅದೇ ಎಪಿಎಂಸಿ ಆವರಣದಲ್ಲಿ ವ್ಯಾಪಾರ ನಡೆಸುವವರು ಶೇ.1 ರಷ್ಟು ಮಾರುಕಟ್ಟೆ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತಿದೆ. ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ ಪ್ರಕಾರ ಒಂದು ಲೋಡ್ ಅಡಿಕೆ ಎಪಿಎಂಸಿ ಒಳಗೆ ವ್ಯಾಪಾರ ನಡೆಸುವ ವರ್ತಕರು 1 ಲಕ್ಷ ರೂ. ಮಾರುಕಟ್ಟೆ ಶುಲ್ಕ ಕಟ್ಟಬೇಕಾಗುತ್ತದೆ. ಎಪಿಎಂಸಿ ಒಳಗೆ ಹಾಗೂ ಹೊರಗೆ ಏಕರೂಪದ ಶುಲ್ಕ ವಿಧಿಸಬೇಕೆಂದು ಕೇಳಿಕೊಂಡರು ಸಹ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಶಿವಮೊಗ್ಗದ ಅಡಿಕೆ ಮಾರುಕಟ್ಟೆಯ ಧಾರಣೆಯನ್ನು ನೋಡಿ ದೇಶದ ಎಲ್ಲಾ ಮಾರುಕಟ್ಟೆಗಳು ದರ ನಿಗದಿ ಮಾಡುತ್ತವೆ. ಪ್ರತಿದಿನ ಶಿವಮೊಗ್ಗದಿಂದ ದೇಶದ ಬೇರೆ ಕಡೆಗೆ ಕನಿಷ್ಟ 10 ರಿಂದ 15 ಲೋಡು ಅಡಿಕೆ ಸಾಗಾಟವಾಗುತ್ತದೆ. ಸರ್ಕಾರದ ಈ ತಾರತಮ್ಯ ನೀತಿಯಿಂದ ಎಪಿಎಂಸಿ ಒಳಗೆ ವ್ಯಾಪಾರ ಮಾಡುವುದು ಅಸಾಧ್ಯವಾಗುತ್ತದೆ. ಇದರಿಂದ ಸರ್ಕಾರ ಎಲ್ಲಾ ಕಡೆ ವ್ಯಾಪಾರಗಳಿಗೂ ಏಕರೂಪ ಶುಲ್ಕ ವಿಧಿಸುವವರೆಗೊ ನಮ್ಮ ಅಡಿಕೆ ವ್ಯಾಪಾರವನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.
ಇದರಿಂದ ಅಡಿಕೆ ಟೆಂಡರ್ ಪ್ರಕ್ರಿಯೆ ಬಂದ್ ಮಾಡಲಾಗುವುದು. ನಮ್ಮ ಈ ನಿರ್ಧಾರಕ್ಕೆ ಎಪಿಎಂಸಿಯಲ್ಲಿನ ಅಡಿಕೆ ವ್ಯಾಪಾರಿಗಳು, ಮೆಕ್ಕೆಜೋಳ, ದಿನಸಿ ವ್ಯಾಪಾರಿಗಳು ಸೇರಿದಂತೆ ಎಲ್ಲಾ ವ್ಯಾಪಾರಿಗಳು ಬೆಂಬಲ ನೀಡಿದ್ದಾರೆ. ಇದರಿಂದ ನಮ್ಮ ಅನಿರ್ದಿಷ್ಟವಧಿ ವರೆಗೂ ಬಂದ್ ಮಾಡಲಾಗುವುದು ಎಂದು ಅಡಿಕೆ ವರ್ತಕರ ಸಂಘದ ಡಿ.ಎಂ. ಶಂಕರಪ್ಪ ತಿಳಿಸಿದ್ದಾರೆ. ಈ ವೇಳೆ ವಿವಿಧ ವರ್ತಕರ ಸಂಘದ ಅಧ್ಯಕ್ಷರುಗಳು ಹಾಜರಿದ್ದರು.