ಬೆಳಗಾವಿ: ರಸ್ತೆ ಪಕ್ಕ ನಿಂತಿದ್ದ ಲಾರಿಗೆ ರಭಸವಾಗಿ ಕಾರು ಗುದ್ದಿದ ಪರಿಣಾಮ ಸ್ಥಳದಲ್ಲೇ ಯುವ ವೈದ್ಯ ಸಾವನ್ನಪ್ಪಿ, ಇಬ್ಬರು ಎಂಬಿಎ ಪದವೀಧರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿಯ ಬಿ.ಎಸ್. ಯಡಿಯೂರಪ್ಪ ಮಾರ್ಗದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಸೌರಬ್ ಕಾಂಬಳೆ (25) ಸ್ಥಳದಲ್ಲೇ ಮೃತಪಟ್ಟ ಯುವ ವೈದ್ಯ. ಜಮಖಂಡಿಯ ಗಿರೀಶ ಕರೆಮ್ಮನವರ (25), ಚೇತನ್ ಧರಿಗೌಡರ (25) ಗಂಭೀರ ಗಾಯಗೊಂಡಿದ್ದಾರೆ.
ಕೂಡಲೇ ಸ್ಥಳೀಯರು ಮತ್ತು ಸಂಚಾರ ಠಾಣೆಯ ಪೊಲೀಸರು, ಇಬ್ಬರು ಗಾಯಾಳು ಯುವಕರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ರಾತ್ರಿ ಪಾರ್ಟಿ ಮುಗಿಸಿ ಮರಳುವಾಗ ನಿಂತ ಲಾರಿಗೆ ರಭಸವಾಗಿ ಗುದ್ದಿದ ಕಾರು ಅಪಘಾತದ ರಭಸಕ್ಕೆ ನಾಲ್ಕೈದು ಪಲ್ಟಿ ಹೊಡೆದಿದೆ. ಸ್ಥಳಕ್ಕೆ ಬೆಳಗಾವಿ ದಕ್ಷಿಣ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸರ್ಕಾರಿ ಬಸ್- ಬೈಕ್ ನಡುವೆ ಅಪಘಾತ: ದ್ವಿಚಕ್ರವಾಹನ ಹಾಗೂ ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿಯಾದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗಬಸಾವಳಗಿ ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ನಡೆದಿದೆ. ಡಿಕ್ಕಿ ಹೊಡೆದ ಕಾರಣ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಸ್ ಸಂಪೂರ್ಣ ಸುಟ್ಟು ಹೋಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು. ಬೆಂಕಿ ನಂದಿಸಿದ ನಂತರ ಸಂಚಾರ ಆರಂಭವಾಯಿತು. ಜಿಲ್ಲೆಯ ಮೊರಟಗಿಯಿಂದ ಸಿಂದಗಿಗೆ ಬರುತ್ತಿದ್ದ ಬಸ್ಗೆ ಸಿಂದಗಿಯಿಂದ ಮೊರಟಗಿಯತ್ತ ಹೊರಟಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೃತ ಬೈಕ್ ಸವಾರನ ಹೆಸರು ವಿಳಾಸ ಪತ್ತೆಗೆ ಸಿಂದಗಿ ಪೊಲೀಸರು ಮುಂದಾಗಿದ್ದಾರೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಕನ ಮನೆಗೆ ಹೊರಟಿದ್ದ ಸಹೋದರ ರಸ್ತೆ ಅಪಘಾತದಲ್ಲಿ ಸಾವು: ಬೈಕ್ ಹಾಗೂ ಕ್ಯಾಂಟರ್ ಲಾರಿ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ನಡೆದಿದೆ. ಹೊಸನಗರ ತಾಲೂಕು ಮಾವಿನಹೊಳೆ ಕ್ರಾಸ್ನಲ್ಲಿ ನಡೆದ ಅಪಘಾತದಲ್ಲಿ ಸುಮಂತ್(25) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸುಮಂತ್ ರಿಪ್ಪನಪೇಟೆಯ ಹೊಂಬುಜ ಸಮೀಪದ ಗರ್ತಿಕೆರೆ ನಿವಾಸಿ ಎಂದು ಗುರುತಿಸಲಾಗಿದೆ.
ಸುಮಂತ್ ತನ್ನ ಅಕ್ಕನ ಮನೆಗೆ ಬೈಕ್ನಲ್ಲಿ ಹೋಗುವಾಗ ರಸ್ತೆ ತಿರುವಿನಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಹೊಸನಗರ ಪಿಎಸ್‌ಐ ಶಿವಾನಂದ ಕೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದರು. ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಡಕಾಯಿತಿ ಗ್ಯಾಂಗ್ನ ಖದೀಮರ ಹೆಡೆಮುರಿಕಟ್ಟಿದ ಖಾಕಿ