ಶಿವಮೊಗ್ಗ: ಶಿವಮೊಗ್ಗ ನಗರದ ಶಾಲೆಗಳಲ್ಲಿ ಕೋವಿಡ್ ಹೆಚ್ಚಾದ ಕಾರಣ ನಾಳೆಯಿಂದ (ಬುಧವಾರ) ಮೂರು ದಿನ 1ರಿಂದ 9ನೇ ತರಗತಿಯ ತನಕ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್.ಈಶ್ವರಪ್ಪ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕೋವಿಡ್ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ನಾಳೆಯಿಂದ ಮೂರು ದಿನ ಶಾಲೆಗಳಿಗೆ ರಜೆ ನೀಡುವುದರಿಂದ ಕೋವಿಡ್ ಸಂಖ್ಯೆ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇದೆ ಎಂದರು.
ನಗರದ 45 ಶಾಲಾ-ಕಾಲೇಜುಗಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಇದರಲ್ಲಿ ಶಿವಮೊಗ್ಗದ 208 ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಕೋವಿಡ್ ದೃಢಪಟ್ಟಿದೆ. ಭದ್ರಾವತಿ 12, ತೀರ್ಥಹಳ್ಳಿ 12, ಸಾಗರದ 20, ಸೊರಬದ 02, ಶಿಕಾರಿಪುರ 09 ಹಾಗೂ ಹೊಸನಗರದಲ್ಲಿ 09 ಶಾಲೆಗಳಲ್ಲಿ ಕೋವಿಡ್ ಪತ್ತೆಯಾಗಿದೆ. ಭದ್ರಾವತಿಯಲ್ಲಿ 50, ತೀರ್ಥಹಳ್ಳಿಯಲ್ಲಿ 30, ಸಾಗರದಲ್ಲಿ 39, ಸೊರಬದಲ್ಲಿ 08, ಶಿಕಾರಿಪುರದಲ್ಲಿ 11 ಜನರಲ್ಲಿ ಸೋಮವಾರ ಪಾಸಿಟಿವ್ ಕಂಡುಬಂದಿದೆ. ಜಿಲ್ಲೆಯ 270 ಗ್ರಾಮ ಪಂಚಾಯತ್ಗಳಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ: 1 ಲೀಟರ್ ಹಾಲಿನ ದರ 3 ರೂ.ಏರಿಸಲು KMF ಚಿಂತನೆ.. ನಿಮ್ ಬಾಯಿ ಸುಡಲಿದೆ ಮಿಲ್ಕ್..
ವೀಕೆಂಡ್ ಕರ್ಫ್ಯೂ ಬಗ್ಗೆ ಶುಕ್ರವಾರ ಸಚಿವ ಸಂಪುಟ ಸಭೆ ನಡೆಸಿದ ನಂತರ ಸಿಎಂ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.
ಮಾರಿ ಜಾತ್ರೆ ಮುಂದೂಡಿಕೆ:
ಫೆಬ್ರವರಿಯಲ್ಲಿ ನಡೆಯಬೇಕಿದ್ದ ಮಾರಿ ಜಾತ್ರೆಯನ್ನು ಮಾರ್ಚ್ಗೆ ಮುಂದೂಡಲಾಗಿದೆ. ಇಂದು ದೇವಾಲಯ ಸಮಿತಿ ಸದಸ್ಯರ ಜೊತೆ ಸಭೆ ನಡೆಸಲಾಗಿದೆ. ಸಮಿತಿಯವರು ಜಿಲ್ಲಾಡಳಿತದ ತೀರ್ಮಾನಕ್ಕೆ ಬದ್ಧ ಎಂದು ತಿಳಿಸಿದ್ದಾರೆ ಎಂದರು.
ಗಾಂಜಾ ಮಾರಾಟಕ್ಕೆ ಬ್ರೇಕ್:
ಗಾಂಜಾ ಮಾರಾಟ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿದೆ. ಜಿಲ್ಲೆಗೆ ಆಂಧ್ರದಿಂದ ಗಾಂಜಾ ಸರಬರಾಜು ಆಗುತ್ತಿತ್ತು. ಈಗ ಅದನ್ನು ಬಂದ್ ಮಾಡಲಾಗಿದೆ. ಇಲ್ಲಿ ಪೊಲೀಸ್ ಇಲಾಖೆಯು ಸೂಕ್ತ ಕ್ರಮ ತೆಗೆದುಕೊಂಡಿದೆ ಎಂದು ಹೇಳಿದರು.