ಶಿವಮೊಗ್ಗ: ಡಿಕೆಶಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಇಡಿ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಲಾಗಿದೆ. ಅದರಲ್ಲಿ ಬೇರೆ ಏನೂ ಇಲ್ಲ. ಯಾರ ಮೇಲೋ ಒತ್ತಡ ಹೇರಲಿಕ್ಕೆ ನಾವು ಇಡಿ ಬಳಕೆ ಮಾಡಿಕೊಳ್ಳಬೇಕಾ?. ದೇಶದಲ್ಲಿ ಬಿಜೆಪಿ ಸೇರಲು ಬೇಕಾದಷ್ಟು ಜನ ತುದಿಗಾಲಲ್ಲಿ ನಿಂತಿದ್ದಾರೆ. ಇಡಿಯನ್ನು ಬಳಕೆ ಮಾಡಿಕೊಳ್ಳುವಷ್ಟು ದರಿದ್ರತನ ಬಿಜೆಪಿಗೆ ಬಂದಿಲ್ಲ ಎಂದು ಖಾರವಾಗಿ ಹೇಳಿದರು.
ಎಸ್ಎಸ್ಎಲ್ಸಿ ಪರೀಕ್ಷೆ ಹಗರಣ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಫೇಕ್ ಮಾರ್ಕ್ಸ್ ಕಾರ್ಡ್ ಕೊಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಮಂಗಳೂರಿನಲ್ಲಿ ಮತ್ತೆ ಹಿಜಾಬ್ ಗಲಾಟೆ: ಮಂಗಳೂರು ವಿವಿಯಲ್ಲಿ ಆಗಿರುವುದು ನನ್ನ ಗಮನಕ್ಕೂ ಬಂದಿದೆ. ವಿವಿಯ ಆಡಳಿತ ಮಂಡಳಿ ಅವರ ಜೊತೆ ಮಾತನಾಡುತ್ತೇನೆ. ಕೋರ್ಟ್ ಅದೇಶದಂತೆ ನಡೆದುಕೊಳ್ಳಬೇಕು. ಆಗಿಲ್ಲ ಅಂದ್ರೆ ದೂರು ಕೊಡ್ತಾರೆ. ಕಾನೂನು ಪ್ರಕಾರ ಕ್ರಮ ಆಗುತ್ತೆ. ಯಾರು ಕಾಲ್ ಮಾಡಿದ್ರೂ ಕೋರ್ಟ್ ಆದೇಶದಂತೆ ಎಲ್ಲವೂ ನಡೆಯೋದು ಎಂದು ಹೇಳಿದರು.
ಪಠ್ಯ ಪುಸ್ತಕ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ನಾನೇನು ಹೇಳಲ್ಲ. ಶಿಕ್ಷಣ ಸಚಿವರು, ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. ಒಂದು ಬದಲಾವಣೆ ಸಂದರ್ಭದಲ್ಲಿ ಇವೆಲ್ಲವೂ ಆಗ್ತಾ ಇದೆ. ಮುಂಬರುವ ಪ್ರಜೆಗಳು ಯಾವ ದಿಕ್ಕಿನಲ್ಲಿ ಸಾಗಬೇಕು. ದೇಶ ಹೇಗೆ ಸಾಗಬೇಕು ಎಂಬ ವಿಶನ್ ಇದೆ. ಅದರ ಪ್ರಕಾರ ಪಠ್ಯಪುಸ್ತಕ ಹಾಗೂ ಪರೀಕ್ಷೆ ಆಗುತ್ತದೆ. ಯಾವುದನ್ನು ಸಹ ಕೈಬಿಟ್ಟಿಲ್ಲ. ಸಾಹಿತಿಗಳನ್ನು ಬಿಟ್ಟು ಈಗ ಜಾತಿ ತಂದಿದ್ದಾರೆ. ಕುವೆಂಪು ಅವರು ತುಂಬಾ ದೊಡ್ಡವರು. ಕುವೆಂಪು ಅವರನ್ನು ಬಿಡಲಿಲ್ಲ, ಯಾರನ್ನು ಬಿಡಲಿಲ್ಲ ಎಂದರು.
ಇದನ್ನೂ ಓದಿ: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ನಾನು ತಟಸ್ಥ: ಸುಮಲತಾ ಅಂಬರೀಶ್
ಪಿಎಸ್ಐ ನೇಮಕಾತಿ ಅಕ್ರಮ ವಿಚಾರವಾಗಿ ಮಾತನಾಡಿದ ಅವರು, ಅಕ್ರಮದ ಬಗ್ಗೆ ಸಿಐಡಿ ವಿಶೇಷವಾದ ತನಿಖೆ ಮಾಡುತ್ತಿದೆ. ಅದರಲ್ಲಿ ಐಜಿಪಿ ಅವರನ್ನು ಕೂಡ ವಿಚಾರಣೆ ಮಾಡ್ತಾ ಇದ್ದಾರೆ. ಯಾರನ್ನು ಕೂಡ ಬಿಡುವ ಪ್ರಶ್ನೆಯೇ ಇಲ್ಲ. ಕಾನೂನು ತನ್ನ ಹಾದಿಯನ್ನು ಕ್ರಮಿಸುತ್ತದೆ. ಯಾವುದೇ ದೊಡ್ಡ ರ್ಯಾಂಕಿನ ಅಧಿಕಾರಿ ಇರಬಹುದು. ಯಾರನ್ನು ಬಿಡುವ ಪ್ರಶ್ನೆಯೇ ಬರಲ್ಲ. ಪರೀಕ್ಷೆಯಲ್ಲಿ ಹೀಗೆ ಮಾಡಿದ್ರೇ ನಿರರ್ಥಕ ಆಗುತ್ತೆ. ಅರ್ಥವಿಲ್ಲದ ಪರೀಕ್ಷೆ ಆಗುತ್ತದೆ. ಪರೀಕ್ಷೆಗೆ ವರ್ಷಾನುಗಟ್ಟಲೇ ಕಷ್ಟ ಪಟ್ಟವರು ಇಂದು ಕಣ್ಣೀರು ಹಾಕ್ತಾ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇವರನ್ನು ಸುಮ್ಮನೆ ಬಿಡಬಾರದು ಎಂದರು.