ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಅರಳಸುರಳಿ ಗ್ರಾಮದ ಬಳಿಯ ಕೆಕೋಡ್ಲು ಗ್ರಾಮದ ರಾಘವೇಂದ್ರ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭರತ್ ನಿನ್ನೆ (ಮಂಗಳವಾರ) ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ತೀರ್ಥಹಳ್ಳಿಯ ಅರಳಸುರಳಿ ಗ್ರಾಮದ ಹೊಸನಗರ ರಸ್ತೆಯ ಗಣಪತಿ ಕಟ್ಟೆ ರೈಸ್‌ಮಿಲ್ ಹತ್ತಿರದ ಮನೆಯೊಂದರಲ್ಲಿ ಅಕ್ಟೊಬರ್ 8 ರಂದು ಬೆಳಗ್ಗೆ ರಾಘವೇಂದ್ರ (63), ಪತ್ನಿ ನಾಗರತ್ನ (55) ಹಾಗೂ ಪುತ್ರ ಶ್ರೀರಾಮ್ (34) ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ, ಇನ್ನೊಬ್ಬ ಪುತ್ರ ಭರತ್ (30) ಗಂಭೀರವಾಗಿ ಗಾಯಗೊಂಡಿದ್ದರು.
ಪೊಲೀಸರು ಹೇಳಿದ್ದೇನು?: ರಾಘವೇಂದ್ರ ಅವರ ಕುಟುಂಬಸ್ಥರೆಲ್ಲ ಮನೆಯೊಳಗೆ ಕಟ್ಟಿಗೆ ಹಾಕಿ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಮೃತ ಮೂವರು ಒಬ್ಬರ ಕೈ ಇನ್ನೊಬ್ಬರು ಹಿಡಿದುಕೊಂಡು ಸಾವನ್ನಪ್ಪಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಭರತ್ನನ್ನು ತೀರ್ಥಹಳ್ಳಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿತ್ತು. ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ದೇಹದ ಶೇ 60 ರಷ್ಟು ಸುಟ್ಟಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಭರತ್ ನಿನ್ನೆ (ಮಂಗಳವಾರ) ಸಾವನ್ನಪ್ಪಿದ್ದಾರೆ ಎಂದು ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕೆಕೋಡ್ಲು ಗ್ರಾಮದಲ್ಲಿ ರಾಘವೇಂದ್ರ ಅವರು ಗೌರವನ್ವಿತ ಕುಟುಂಬದವರು. ಇವರ ಸಹೋದರೂಬ್ಬರು ಆರ್ಎಸ್ಎಸ್ನ ಪೂರ್ಣ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೊಬ್ಬರು ವೈದ್ಯರಾಗಿ, ಇನ್ನೊಬ್ಬರು ಬಿಎಸ್ಎನ್ಎಲ್ನಲ್ಲಿ ಉದ್ಯೋಗಿಗಳಾಗಿದ್ದಾರೆ. ಅವರಿಗೆ ಪಿತ್ರಾರ್ಜಿತವಾಗಿ ಬಂದಿರುವ 10 ಎಕರೆ ಅಡಕೆ ತೋಟವಿದೆ. ಸಹೋದರರು ಸರ್ಕಾರಿ ಕೆಲಸಕ್ಕೆ ಹೋದಾಗ ತೋಟವನ್ನು ಜೋಪಾನ ಮಾಡಿದ್ದು, ರಾಘವೇಂದ್ರ ಅವರು ಹಾಗೂ ಅವರ ಮಕ್ಕಳು. ಪ್ರಸ್ತುತ ಸಹೋದರಿಬ್ಬರು ಸೇವಾ ನಿವೃತ್ತಿ ಹೊಂದಿದ್ದಾರೆ. ಈ ವೇಳೆ ಆಸ್ತಿ ವಿಭಜನೆ ವಿಚಾರವಾಗಿ ಕಲಹ ನಡೆದಿತ್ತು ಎಂಬ ವಿಚಾರ ಹೊರ ಬಿದ್ದಿದೆ. ಇದೇ ವಿಚಾರವಾಗಿಯೇ ಮನನೊಂದಿದ್ದ ರಾಘವೇಂದ್ರ ಕುಟುಂಬದವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ಈ ಪ್ರಕರಣಕ್ಕೆ ನಿಖರವಾದ ಕಾರಣ ಏನು ಎಂಬುದನ್ನು ತಿಳಿಸಬೇಕಿದ್ದ ಭರತ್ ಕೂಡ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಹೀಗಾಗಿ ಪೊಲೀಸರು ಪ್ರಕರಣದ ತನಿಖೆಯನ್ನು ಬೇರೆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಸ್ಥಿತಿಯಲ್ಲಿದ್ದಾರೆ. ಭರತ್ ಸಾವು, ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನ ಸದ್ಯಕ್ಕೆ ನಿಗೂಢವಾಗಿಯೇ ಉಳಿಯುವಂತೆ ಮಾಡಿದೆ.
ಇದನ್ನೂ ಓದಿ: ಅಪಘಾತದ ನಂತರ 25 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಹಿಳೆ: ಬುದ್ಧಿಮಾಂದ್ಯ ಮಗನ ಎದುರಲ್ಲೇ ಆತ್ಮಹತ್ಯೆಗೆ ಶರಣು