ಶಿವಮೊಗ್ಗ: ಈ ಹಿಂದೆ ಯಡಿಯೂರಪ್ಪ ಸರ್ಕಾರ ಇದ್ದಾಗ ಮನೆ ಬಿದ್ದ ಕುಟುಂಬಕ್ಕೆ ತಕ್ಷಣ 5 ಲಕ್ಷ ಪರಿಹಾರ ಕೊಡುತ್ತಿದ್ದರು. ಆದರೆ, ಹೊಸ ಸರ್ಕಾರ ಬಂದ ನಂತರ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಕಾರ್ಯಸೂಚಿ ಬಂದಿಲ್ಲ. 20 ಸಾವಿರ ಕೊಡ್ತಾರೋ, 1 ಲಕ್ಷ ಕೊಡ್ತಾರೋ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಪರಿಹಾರ ನೀಡುವ ಬಗ್ಗೆ ಅಧಿಕಾರಿಗಳು ಗೊಂದಲದಲ್ಲಿದ್ದಾರೆ ಎಂದು ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿರುವ ಅಂಜನಾಪುರ ಹಾಗೂ ಅಂಬ್ಲಿಗುಡಾ ಜಲಾಶಯಕ್ಕೆ ಬಾಗಿನವನ್ನು ಸಲ್ಲಿಸಿದ್ದೇನೆ. ಇವತ್ತು ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ಹೀಗಾಗಿ ಜಿಲ್ಲೆಯ ಅಲ್ಲಲ್ಲಿ ಸಾಕಷ್ಟು ಹಾನಿಯಾಗಿದೆ. ಮನೆಗಳು ಬೀಳುತ್ತಿವೆ. ಹೀಗಾಗಿ ಇಂದು ಬೆಳಗ್ಗೆ ಗ್ರಾಮಕ್ಕೆ ಭೇಟಿ ಕೊಟ್ಟು ಮನೆ ಬಿದ್ದಿರುವ ಸ್ಥಳವನ್ನೂ ಕೂಡಾ ಪರೀಕ್ಷೆ ಮಾಡಿದ್ದೇನೆ. ಶಿಕಾರಿಪುರ ತಾಲೂಕಿನಲ್ಲಿ 40-50 ಮನೆಗಳು ಬಿದ್ದಿವೆ. ಕೂಡಲೇ ಸರ್ಕಾರ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಶಾಸಕ ತನ್ವೀರ್ ಸೇಠ್ ಗೃಹ ಸಚಿವರಿಗೆ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಡಿ.ಜೆ ಹಳ್ಳಿ ಕೆ. ಜೆ ಹಳ್ಳಿ ಪ್ರಕರಣದಲ್ಲಿ ಅವರ ಶಾಸಕರ ಮನೆಗೆ ಬೆಂಕಿ ಹಚ್ಚಲಾಗಿತ್ತು. ಮೊನ್ನೆ ದಿನ ಉಗ್ರಗಾಮಿಗಳ ಮನೆಯಲ್ಲಿ ಶಸ್ತ್ರಾಸ್ತ್ರಗಳು ಸಿಕ್ಕಿದರೂ ಕೂಡಾ ಸಚಿವರು, ಸರ್ಕಾರ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಕಿಡಿಕಾರಿದರು.
ಉಡುಪಿಯ ಕಾಲೇಜಿನಲ್ಲಿ ನಡೆದ ಘಟನೆ ವಿಚಾರ: ಉಡುಪಿ ಕಾಲೇಜಿನಲ್ಲಿ ವಿಡಿಯೋ ಮಾಡಿರುವ ವಿಚಾರದ ಕುರಿತು ಮಾತನಾಡಿದ ಅವರು, ವಿಡಿಯೋ ಮಾಡಿರುವ ಬಗ್ಗೆ ಹೆಣ್ಣು ಮಗಳು ಟ್ವೀಟ್ ಮಾಡಿದ್ದಕ್ಕೆ ಅಧಿಕಾರಿಗಳು ಅವರ ಮನೆಗೆ ಹೋಗಿ ವಿಚಾರಣೆ ಮಾಡಿದ್ದಾರೆ. ಸರ್ಕಾರದ ಧೋರಣೆ ಏನು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಸ್ಪಷ್ಟ ಬಹುಮತದಲ್ಲಿ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಅಮಲಿನಲ್ಲಿ ಸರ್ಕಾರ ತೇಲುತ್ತಿದೆ ಎಂದು ಕಿಡಿಕಾರಿದರು. ಅಧಿಕಾರದ ಅಮಲಿನಿಂದ ಹೊರ ಬಂದು ರೈತರ ಸಮಸ್ಯೆಗೆ ಸ್ಪಂದಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಸರ್ಕಾರ ಅದರ ಕಡೆಯೂ ಗಮನ ಕೊಡಬೇಕು ಎಂದರು.
ಬೆಳೆ ವಿಮೆ ಕಟ್ಟುವ ಡೆಡ್ಲೈನ್ ದಿನಾಂಕವನ್ನು ವಿಸ್ತರಣೆ ಮಾಡಬೇಕು: ಬೆಳೆ ವಿಮೆ ಕಟ್ಟಲು ಇನ್ನು ಏಳೆಂಟು ದಿನ ಬಾಕಿ ಇದೆ. ಬೆಳೆ ವಿಮೆ ಕಟ್ಟುವ ಡೆಡ್ ಲೈನ್ ದಿನಾಂಕವನ್ನು ವಿಸ್ತರಣೆ ಮಾಡಬೇಕು. ಬೆಳೆ ವಿಮೆ ಕಟ್ಟಲು ಆಗಸ್ಟ್ 31 ರ ತನಕ ಅವಧಿ ವಿಸ್ತರಿಸಬೇಕು ಎಂದರು.
ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು ಎಂಬಂತಿದೆ ಬಿ ವೈ ವಿಜಯೇಂದ್ರ: ದೇಶದ ವಿಪಕ್ಷಗಳ ಕಥೆ ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೀತು ಎಂಬಂತಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ಬಿ ವೈ ವಿಜಯೇಂದ್ರ (ಜುಲೈ 17-2023)ರಂದು ವಾಗ್ದಾಳಿ ನಡೆಸಿದ್ದರು. ಅಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರು ಮಹಾನಗರದಲ್ಲಿ ದೇಶದ ಎಲ್ಲ ವಿಪಕ್ಷಗಳು ಒಗ್ಗೂಡಿ ಸಭೆ ಮಾಡ್ತಿವೆ. ಇಂಥ ಪರಿಸ್ಥಿತಿ ವಿಪಕ್ಷಗಳಿಗೆ ಬಂದೊದಗಿದೆ. ಮೋದಿಜಿ ನಾಯಕತ್ವವನ್ನು ಜಗತ್ತು ಕೊಂಡಾಡುವಾಗ, 20ಕ್ಕೂ ಹೆಚ್ಚು ರಾಷ್ಟ್ರಗಳು ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿವೆ. ಆದರೆ ನಮ್ಮ ದೇಶದ ವಿಪಕ್ಷಗಳಿಗೆ ದೇಶ ಕಟ್ಟುವ ಚಿಂತನೆ ಇಲ್ಲ ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: ದೇಶದ ವಿಪಕ್ಷಗಳ ಕಥೆ ಎತ್ತು ಏರಿಗೆ ಎಳೆದ್ರೆ, ಕೋಣ ನೀರಿಗೆ ಎಳೀತು ಎಂಬಂತಿದೆ: ಬಿ ವೈ ವಿಜಯೇಂದ್ರ