ಶಿವಮೊಗ್ಗ : ನಾಗರ ಹಾವಿನ 11 ನೇ ದಿನದ ಪುಣ್ಯ ಸ್ಮರಣೆ ಮಾಡುವ ವೇಳೆ ವ್ಯಕ್ತಿಯೊಬ್ಬರ ಮೈ ಮೇಲೆ ಆವಾಹನೆಯಾಗಿ ತನಗೆ ಗುಡಿ ಕಟ್ಟಿಸುವಂತೆ ಕೇಳಿಕೊಂಡಿದೆಯಂತೆ. ಡಿಸೆಂಬರ್ 5 ರಂದು ಶಿವಮೊಗ್ಗದ ಸಾಗರ ರಸ್ತೆ, ಎಪಿಎಂಸಿ ಮುಂಭಾಗದ ರಸ್ತೆ ಪಕ್ಕದಲ್ಲಿ ಸಣ್ಣದೂಂದು ಆಂಜನೇಯನ ಗುಡಿ ಇತ್ತು. ಈ ಗುಡಿಯನ್ನು ಸ್ಮಾರ್ಟ್ ಸಿಟಿ ಕಾಮಗಾರಿ ನಡೆಸುವ ವೇಳೆ ಗುಡಿ ಕೆಡವಲಾಗಿತ್ತು.
ಈ ವೇಳೆ ಅಲ್ಲಿ ನಾಗರಹಾವೊಂದು ಪ್ರತ್ಯಕ್ಷವಾಗಿ, ಜೆಸಿಬಿಗೆ ಅಡ್ಡಲಾಗಿ, ಸಾಕಷ್ಟು ಸಮಯ ಕಾಮಗಾರಿ ನಡೆಸಲು ಬಿಡದೆ ಅಡ್ಡಲಾಗಿ ನಿಂತಿತಂತೆ. ನಂತರ ಜೆಸಿಬಿ ಚಾಲಕ ಹಾವನ್ನು ಕೊಂದು ಗುಡಿ ನೆಲಸಮ ಮಾಡಿ ಹಾಕಿದ್ದನಂತೆ. ಈ ವೇಳೆ ಭಜರಂಗದಳದ ಕಾರ್ಯಕರ್ತರು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದ್ದರು. ನಂತರ ಸ್ಮಾರ್ಟ್ ಸಿಟಿ ಇಂಜಿನಿಯರ್ ವಿರುದ್ಧ ಅರಣ್ಯ ಇಲಾಖೆ ಹಾಗೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಇಂದು ಸ್ಥಳೀಯ ಆಟೋ ಚಾಲಕರ ಸಂಘದವರು ನಾಗರ ಹಾವಿನ 11 ನೇ ದಿನದ ಪುಣ್ಯ ಸ್ಮರಣೆ ಮಾಡುವ ಸಲುವಾಗಿ ನಡೆದ ಪೂಜೆಯಲ್ಲಿ ಆಟೋ ಚಾಲಕರ ಮೇಲೆ ನಾಗರ ಹಾವು ಆವಾಹನೆಯಾಗಿದೆಯಂತೆ. ನಾಗರ ಹಾವು ಆವಾಹನೆಯಾಗಿ, ಆಂಜನೇಯ ಹಾಗೂ ತನ್ನ ಗುಡಿಯನ್ನು ಸ್ಥಾಪಿಸುವಂತೆ ಸೂಚಿಸಿದೆಯಂತೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಒಮಿಕ್ರಾನ್ ಸೋಂಕಿನಿಂದ ಗುಣಮುಖವಾಗಿ ಮನೆಗೆ ತೆರಳಿದ ವ್ಯಕ್ತಿ ನೀಡಿದರು ಕೆಲ ಉಪಯುಕ್ತ ಟಿಪ್ಸ್..