ಶಿವಮೊಗ್ಗ: ಸಾಗರ ತಾಲೂಕು ಬರೂರು ಗ್ರಾಮದ ಬಳಿ ಕಲ್ಲೊಡ್ಡು ಹಳ್ಳ ನಿರ್ಮಾಣ ಮಾಡುವ ಸರ್ಕಾರದ ಕ್ರಮ ಖಂಡಿಸಿ ಸಾಗರ ಪಟ್ಟಣದಲ್ಲಿ ಬರೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಸಾಗರದ ಗಣಪತಿ ಕೆರೆಯ ಗಣಪತಿ ದೇವಾಲಯದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಉಪವಿಭಾಗೀಯ ಕಚೇರಿಗೆ ತಲುಪಿತು. ಪ್ರತಿಭಟನೆಯಲ್ಲಿ ಹಾಲಿ ಶಾಸಕ ಹರತಾಳು ಹಾಲಪ್ಪ, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪಾಲ್ಗೊಂಡಿದ್ದರು. ಕಲ್ಲೊಡ್ಡು ಯೋಜನೆಯಿಂದ ಸಾಗರದ 10ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆ ಆಗಲಿದೆ. ಅಲ್ಲದೆ ಅರಣ್ಯ ಭೂಮಿ ಸಹ ಮುಳುಗಡೆ ಆಗುತ್ತದೆ. ಇದರಿಂದ ಸಾಗರ ತಾಲೂಕಿನ ಜನ ಭೂಮಿ ಕಳೆದು ಕೊಳ್ಳಲಿದ್ದಾರೆ.
ಲಿಂಗನಮಕ್ಕಿ ಆಣೆಕಟ್ಟೆಯಿಂದ ಮುಳುಗಡೆಯಾದ ಪ್ರದೇಶದ ಜನ ಇಲ್ಲಿ ಬಂದು ನೆಲೆಸಿದ್ದು, ಈಗ ಮತ್ತೆ ಮುಳುಗಡೆ ಭೀತಿಯಲ್ಲಿದ್ದಾರೆ. ಈ ಯೋಜನೆಯಿಂದ ಕೇವಲ ಶಿಕಾರಿಪುರ ಭಾಗಕ್ಕೆ ಮಾತ್ರ ನೀರಾವರಿ ಅನುಕೂಲವಾಗುತ್ತದೆ. ಇದು ಕೇವಲ ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುವ ಹಳ್ಳವಾಗಿದೆ. ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯಲು ಸಹ ನೀರು ಸಿಗುವುದಿಲ್ಲ. ಇಂತಹ ಹಳ್ಳಕ್ಕೆ ಬ್ಯಾರೇಜ್ ರೂಪದ ಅಣೆಕಟ್ಟು ಬೇಕಾ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.
ಪ್ರತಿಭಟನೆಯ ನಂತರ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ನೇತೃತ್ವದಲ್ಲಿ ಉಪವಿಭಾಗಧಿಕಾರಿ ದರ್ಶನ್ರವರಿಗೆ ಯೋಜನೆ ಕೈ ಬಿಡುವಂತೆ ಮನವಿ ಸಲ್ಲಿಸಲಾಯಿತು. ಹಾಲಿ ಶಾಸಕ ಹರತಾಳು ಹಾಲಪ್ಪ ನಾನು ಜನರ ಪರವಾಗಿ ಇರುತ್ತೇನೆ ಎಂಬ ವಿಶ್ವಾಸದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಯೋಜನೆ ಕೈಬಿಡದೆ ಹೋದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯ ರೈತರು ಸೇರಿದಂತೆ ವಿವಿಧ ಸಂಘಟನೆಗಳು ಭಾಗಿಯಾಗಿದ್ದವು.