ಶಿವಮೊಗ್ಗ: ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ನಾಲ್ವರು ಖದೀಮರನ್ನು ಬಂಧಿಸಿ, 52 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ 8 ಬೈಕ್ ಮತ್ತು ಒಂದು ಟಿವಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗ ತಾಲೂಕಿನ ಹಾಳ್ ಹೊಳೆ ಗ್ರಾಮದ ಸುರೇಶ್ ಅಲಿಯಾಸ್ ಕರಡಿ (24), ಮಿಳಘಟ್ಟದ ಪ್ರವೀಣ್(22), ಅಭಿಷೇಕ್(22) ಮತ್ತು ಗಾಜನೂರು ಇಂದಿರಾ ನಗರದ ಶಿವಕುಮಾರ್(24) ಬಂಧಿತರು. ಇವರ ವಿರುದ್ಧ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ -2, ತೀರ್ಥಹಳ್ಳಿಯಲ್ಲಿ 1 ಹಾಗೂ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ ದಾಖಲಾಗಿದೆ.
ಆರೋಪಿಗಳು ಹೊಳೆಹೊನ್ನೂರು ಹಾಗೂ ಮಾಳೂರು ಠಾಣೆಯಲ್ಲಿ ಒಟ್ಟು ಎರಡು ಮನೆಗಳ್ಳತನ ಪ್ರಕರಣ ಸೇರಿದಂತೆ ತುಂಗಾನಗರ, ಶಿಕಾರಿಪುರ ಟೌನ್, ಶಿವಮೊಗ್ಗ ಗ್ರಾಮಾಂತರ ಹಾಗೂ ರಿಪ್ಪನಪೇಟೆ ಸೇರಿದಂತೆ ಒಟ್ಟು 8 ಬೈಕ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಜಾಹಿರಾತು:-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಬಿಳಚಿ ಕ್ಯಾಂಪ್ನ ನಿವಾಸಿಯೊಬ್ಬರು ತನ್ನ ಪತ್ನಿಯ ಹೆರಿಗೆಗಾಗಿ ಭದ್ರಾವತಿಯಲ್ಲಿರುವ ಮನೆಗೆ ಬೀಗ ಹಾಕಿ ಹೋಗಿದ್ದರು. ಈ ವೇಳೆ, ಮನೆಯಲ್ಲಿದ್ದ ಒಂದು ಟಿವಿ ಹಾಗೂ 50 ಸಾವಿರ ರೂ. ನಗದನ್ನು 2022 ರ ಜನವರಿ 4 ರಂದು ಕಳ್ಳರು ಕದ್ದುಕೊಂಡು ಹೋಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿ ಕೊಂಡ ಹೊಳೆಹೊನ್ನೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.
ಹೊಳೆಹೊನ್ನೂರು ಪೊಲೀಸ್ ಠಾಣೆಯ ಪಿಐ ಲಕ್ಷ್ಮೀಪತಿ ಅವರ ನೇತೃತ್ವದಲ್ಲಿ ಪಿಎಸ್ಐ ಸುರೇಶ್ ಸಿಬ್ಬಂದಿ ಲಿಂಗೇಗೌಡ, ಮಂಜುನಾಥ್, ಪ್ರಸನ್ನ, ಪ್ರಕಾಶ್ ನಾಯ್ಕ, ವಿಶ್ವನಾಥ್ ಹಾಗೂ ಕಾಶಿನಾಥ್ ಪ್ರಕರಣ ಭೇದಿಸಿದ್ದಾರೆ.