ಶಿವಮೊಗ್ಗ: ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳ ಸಾವು ಮುಂದುವರೆದಿದೆ. ಇಲ್ಲಿನ ಅಂದಾಜು 30 ವರ್ಷದ ನಾಗಣ್ಣ ಎಂಬ ಆನೆ ಸಕ್ರೆಬೈಲು ಆನೆ ಬಿಡಾರದ ಬಳಿಯ ಅರಣ್ಯದಲ್ಲಿ ಇಂದು ಸಾವನ್ನಪ್ಪಿದೆ.
ನಾಗಣ್ಣ ಆನೆಯನ್ನು ಕಳೆದ ಎರಡು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದು ತರಲಾಗಿತ್ತು. ಇದನ್ನು ತಂದು ಸುಮಾರು 6 ತಿಂಗಳ ಕಾಲ ತರಬೇತಿ ನೀಡಿ ಪಳಗಿಸಲಾಗಿತ್ತು. ಮೃತ ಆನೆಯನ್ನು ಕುದರತ್ ಪಾಷ ಎಂಬ ಮಾವುತ ನೋಡಿಕೊಳ್ಳುತ್ತಿದ್ದ.
ನಾಗಣ್ಣ ಆನೆ ನಿನ್ನೆಯವರೆಗೂ ಆಯುಷ್ಮಾನಭವ ಎಂಬ ಕನ್ನಡ ಚಲನಚಿತ್ರದ ಶೂಟಿಂಗ್ನಲ್ಲಿ ಭಾಗವಹಿಸಿತ್ತು. ಇಂದು ಬೆಳಗ್ಗೆ ಆಹಾರ ಸೇವಿಸದ ಕಾರಣ ಆನೆಗೆ ಹೊಟ್ಟೆ ನೋವು ಇರಬಹುದು ಎಂದು ಚಿಕಿತ್ಸೆ ನೀಡಲಾಗುತ್ತಿತ್ತು. ಆಹಾರ ಸೇವಿಸದೆ ಕೇವಲ ನೀರನ್ನು ಮಾತ್ರ ಕುಡಿದಿತ್ತು.
ಆನೆ ಬಿಡಾರದ ವೈದ್ಯ ವಿನಯ್ ಚಿಕಿತ್ಸೆ ನೀಡುತ್ತಿದ್ದರೂ ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಸಾವನ್ನಪ್ಪಿದೆ. ಕಳೆದ ಎರಡು ವರ್ಷಗಳಿಂದ ಸಕ್ರೆಬೈಲು ಆನೆ ಬಿಡಾರದಲ್ಲಿ ಎರಡು ಮರಿಯಾನೆಗಳು ಸೇರಿದಂತೆ ಕಾಡಿನಲ್ಲಿ ಸೆರೆ ಹಿಡಿದಿದ್ದ ಮೂರಕ್ಕೂ ಹೆಚ್ಚು ದೊಡ್ಡ ಆನೆಗಳು ಸಾವನ್ನಪ್ಪಿವೆ. ಇವುಗಳ ಸಾವಿಗೆ ವನ್ಯಜೀವಿ ವಿಭಾಗ ಅಧಿಕಾರಿಗಳು ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ.