ಶಿವಮೊಗ್ಗ: ನವೆಂಬರ್ 6 ರಂದು ನಡೆದ ಟಿಇಟಿ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಮೂಲದ ವಿದ್ಯಾರ್ಥಿನಿಯ ಹಾಲ್ ಟಿಕೆಟ್ನಲ್ಲಿ ಸನ್ನಿ ಲಿಯೋನ್ ಪೋಟೊ ಅಪ್ ಲೋಡ್ ಮಾಡಿದ ಕುರಿತು ಇಂದು ಶಿಕ್ಷಣ ಇಲಾಖೆಯು ಪೊಲೀಸರಿಗೆ ದೂರು ನೀಡಿದೆ.
ಶಿವಮೊಗ್ಗದ ನ್ಯಾಷನಲ್ ರುದ್ರಪ್ಪ ಪಿ ಯು ಕಾಲೇಜಿನಲ್ಲಿ ಪರೀಕ್ಷಾರ್ಥಿ ಪರೀಕ್ಷೆ ಬರೆಯಲು ಬಂದಾಗ ವಿದ್ಯಾರ್ಥಿನಿಯ ಹಾಲ್ ಟಿಕೆಟ್ನಲ್ಲಿ ಪೋಟೊ ಬೇರೆಯದಾಗಿತ್ತು. ಅದು ಹಾಜರಾದ ಚಿಕ್ಕಮಗಳೂರು ಜಿಲ್ಲೆ ವಿದ್ಯಾರ್ಥಿನಿಯ ಪೋಟೊ ಬದಲು ನಟಿ ಸನ್ನಿ ಲಿಯೋನ್ ಪೋಟೊ ಇತ್ತು.
ಈ ಕುರಿತು ಪರೀಕ್ಷಾ ಮೇಲ್ವಿಚಾರಕರು ಸಂಬಂಧ ಪಟ್ಟವರ ಗಮನಕ್ಕೆ ತಂದಿದ್ದರು. ವಿದ್ಯಾರ್ಥಿನಿಯ ಹಾಲ್ ಟಿಕೆಟ್ನಲ್ಲಿ ಪೋಟೊ ಬದಲಾಗಿತ್ತು. ಇದರಿಂದ ವಿದ್ಯಾರ್ಥಿನಿಯು ಪೋಟೊ ಬದಲಾವಣೆ ಮಾಡಿಕೊಂಡು ಬಂದಿದ್ದರು. ಆದರೆ, ಶಿಕ್ಷಣ ಇಲಾಖೆಯು ಪರೀಕ್ಷಾ ಕೇಂದ್ರದ ಹಾಲ್ ಟಿಕೆಟ್ ನಲ್ಲಿ ಬದಲಾವಣೆ ಆಗಿರಲಿಲ್ಲ.
ಇದರಿಂದ ಪೋಟೊ ಬದಲಾವಣೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಶಿಕ್ಷಣ ಇಲಾಖೆಯು ಎಸ್ಪಿ ಮಿಥುನ್ ಕುಮಾರ್ ಅವರಿಗೆ ದೂರು ನೀಡಿದೆ. ಶಿವಮೊಗ್ಗ ಜಿಲ್ಲಾ ಡಿಡಿಪಿಐ ಪರಮೇಶ್ವರಪ್ಪ, ಬಿಇಒ ಲೋಕೇಶ್, ಕಾಲೇಜಿನವರು ದೂರು ನೀಡಿದ್ದಾರೆ. ಎಲ್ಲಿ ಲೋಪ ಉಂಟಾಗಿದೆ ಎಂದು ತನಿಖೆ ಮಾಡಲು ದೂರು ನೀಡಲಾಗಿದೆ ಎಂದು ಡಿಡಿಪಿಐ ಪರಮೇಶ್ವರಪ್ಪ ತಿಳಿಸಿದ್ದಾರೆ.
ಇನ್ನೂ ದೂರಿನ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ಮಿಥುನ್ ಕುಮಾರ್, ಈ ಕುರಿತು ದೂರನ್ನು ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿ ತನಿಖೆ ಮಾಡಲಾಗುತ್ತಿದೆ. ತನಿಖೆ ವೇಗವಾಗಿ ನಡೆಯುತ್ತಿದ್ದು, ಅಭ್ಯರ್ಥಿ ಬಳಿ ಮಾಹಿತಿ ಪಡೆದುಕೊಳ್ಳಲಾಗಿದೆ. ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಭ್ಯರ್ಥಿಯ ಪರೀಕ್ಷಾ ಅರ್ಜಿಯನ್ನು ಬೇರೆಯವರು ಅಪ್ಲೋಡ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಓದಿ: ಶಿಕ್ಷಣ ಇಲಾಖೆ ಎಡವಟ್ಟು: ಟಿಇಟಿ ಪರೀಕ್ಷೆಯಿಂದ ವಿದ್ಯಾರ್ಥಿಗಳು ವಂಚಿತ