ಶಿವಮೊಗ್ಗ: ಡಿಸೆಂಬರ್ 24ರಂದು ಆತ್ಮಹತ್ಯೆಗೆ ಶರಣಾಗಿದ್ದ ಶಿವಮೊಗ್ಗ ಉಪವಿಭಾಗಾಧಿಕಾರಿ ಪ್ರಕಾಶ್ ಅವರ ಪತ್ನಿ ಸುಮಾ ಕೇಸ್ ಇದೀಗ ಮತ್ತೊಂದು ತಿರುವ ಪಡೆದುಕೊಂಡಿದ್ದು, ಸಾವಿನ ಹಿಂದಿನ ನೈಜ ರಹಸ್ಯ ಬಯಲಾಗಿದೆ.
ಸುಮಾ, ಶಿವಮೊಗ್ಗದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಡಿಸೆಂಬರ್ 24ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದರು. ಮಕ್ಕಳಲಾಗಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ನಂತರ ಈ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ ಪೊಲೀಸರು ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಆತ್ಮಹತ್ಯೆಯ ನೈಜ ಕಾರಣ ಬಯಲು ಮಾಡಿದ್ದಾರೆ.
ಸುಮಾ ಆತ್ಮಹತ್ಯೆ ಮಾಡಿಕೊಳ್ಳಲು ಆಕೆ ಕೆಲಸ ನಿರ್ವಹಿಸುತ್ತಿದ್ದ ಶಾಲೆಯ ಮುಖ್ಯ ಶಿಕ್ಷಕಿ ಕಾರಣ ಎಂದು ತಿಳಿದುಬಂದಿದೆ. ಶಾಲಾ ಮುಖ್ಯ ಶಿಕ್ಷಕಿ ಸರಸ್ವತಿ, ಸುಮಾಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ಸುಮಾ ಈ ಬಗ್ಗೆ ತನ್ನ ಗಂಡನಲ್ಲಿಯೂ ಹೇಳಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ಕೆಜಿಎಸ್ ಎಂಬುವವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.