ಶಿವಮೊಗ್ಗ: ಕೆಲವು ದಿನಗಳ ಹಿಂದೆ ನಟ ಸುದೀಪ್ ತಮ್ಮ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಚಿತ್ರದುರ್ಗದ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದರು. ಇದೀಗ ಶಿವಮೊಗ್ಗ ಜಿಲ್ಲೆಯ ಸಾಗರದ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ.
ಸಾಗರ ತಾಲೂಕಿನ ಆವಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಳಸಸಿ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಎಂ.ಎಲ್. ಹಳ್ಳಿಯ ಸರ್ಕಾರಿ ಪ್ರೌಢಶಾಲೆ ಹಾಗೂ ಎಸ್.ಎನ್. ನಗರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳನ್ನು ಸುದೀಪ್ ದತ್ತು ಪಡೆದಿದ್ಧಾರೆ. ಈ ಶಾಲೆಗಳ ಅಭಿವೃದ್ದಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲು ಟ್ರಸ್ಟ್ ಮುಂದಾಗಿದೆ. ಶಾಲೆಯ ಕಟ್ಟಡ ನವೀಕರಣ, ಶೌಚಾಲಯ ಅಭಿವೃದ್ಧಿ, ಗಣಕಯಂತ್ರ, ವಿದ್ಯುತ್, ಇಂಟರ್ನೆಟ್ ಸೇರಿದಂತೆ ಇನ್ನಿತರ ಸೌಲಭ್ಯಗಳ ಮೂಲಕ ಮಕ್ಕಳ ಭೌತಿಕ ಮಟ್ಟ ಹೆಚ್ಚಿಸಿ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಟ್ರಸ್ಟ್ ಉದ್ದೇಶವಾಗಿದೆ.
ಸುದೀಪ್ ಚಾರಿಟೆಬಲ್ ಟ್ರಸ್ಟ್ ತುಮಕೂರಿನ ಮಧುಗಿರಿಯಲ್ಲಿ ಒಂದು ಶಾಲೆ, ಚಿತ್ರದುರ್ಗದ 4 ಶಾಲೆಗಳು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 4 ಶಾಲೆಗಳು ಸೇರಿ ಇದುವರೆಗೂ 9 ಶಾಲೆಗಳನ್ನು ದತ್ತು ಪಡೆದಿದೆ. ಶೀಘ್ರವೇ ಇನ್ನೂ ಒಂದು ಶಾಲೆಯನ್ನು ದತ್ತು ಪಡೆದು ಈ ವರ್ಷ ಒಟ್ಟು 10 ಶಾಲೆಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಿದೆ. ದತ್ತು ಪ್ರಕ್ರಿಯೆಯನ್ನು ಶಿಕ್ಷಣ ಇಲಾಖೆ ಮೂಲಕವೇ ನಡೆಸಲಾಗಿದೆ. ಇದಕ್ಕೆ ಇಲಾಖೆ ಕೂಡಾ ಅನುಮತಿ ನೀಡಿದೆ.
ಈ ವರ್ಷ ಶಾಲೆಗಳು ಆರಂಭವಾಗುತ್ತಿದ್ದಂತೆ ಚಾರಿಟೆಬಲ್ ಟ್ರಸ್ಟ್ ತನ್ನ ಕೆಲಸ ಪ್ರಾರಂಭಿಸಲಿದೆ. ಎಸ್.ಎನ್. ನಗರದ ಶಾಲೆ ಸಾಗರ ಪಟ್ಟಣದ ಪಕ್ಕದಲ್ಲೇ ಇದೆ. ಆದರೆ ಉಳಿದ ಮೂರು ಶಾಲೆಗಳು ಶರಾವತಿ ಹಿನ್ನಿರಿನ ಪ್ರದೇಶದಲ್ಲಿ ಇದೆ. ಇಂತಹ ಹಿಂದುಳಿದ ಪ್ರದೇಶದ ಶಾಲೆಗಳನ್ನು ಹುಡುಕಿ ದತ್ತು ಪಡೆದಿರುವುದು ವಿಶೇಷವೇ ಸರಿ.
ಲಾಕ್ ಡೌನ್ ಸಮಯದಲ್ಲಿ ಕಿಚ್ಚ ಸುದೀಪ್ ಚಾರಿಟೆಬಲ್ ಸೂಸೈಟಿಯು ರಾಜ್ಯಾದ್ಯಂತ ಸಿನಿಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿತ್ತು. ಕಿಚ್ಚ ಸುದೀಪ್ ಅವರ ಸಮಾಜ ಸೇವೆ ಹೀಗೆ ಮುಂದುವರೆಯಲಿ ಎಂಬುದೇ ನಮ್ಮ ಆಶಯ.