ಶಿವಮೊಗ್ಗ: ನಗರದಲ್ಲಿ ನಿನ್ನೆ ರಾತ್ರಿ ಕೊಲೆಯಾದ ಹಿಂದುಪರ ಸಂಘಟನೆಯ ಯುವಕ ಹರ್ಷನ ಮೃತದೇಹದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ರವಿವರ್ಮ ಬೀದಿ, ಸಿದ್ದಯ್ಯ ರಸ್ತೆಯಲ್ಲಿ ಒಂದು ಗುಂಪಿನಿಂದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಟಿಯರ್ ಗ್ಯಾಸ್ ಪ್ರಯೋಗಿಸಿದ್ದಾರೆ.
ಮೆರವಣಿಗೆಯಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹಾಗೂ ಸಂಸದ ರಾಘವೇಂದ್ರ ಭಾಗವಹಿಸಿದ್ದಾರೆ. ಸದ್ಯ ಮೆರವಣಿಗೆಯು ಗಾಂಧಿ ಬಜಾರ್ ತಲುಪಿದೆ. ಹರ್ಷನ ಅಂತ್ಯ ಸಂಸ್ಕಾರ ಬಿ.ಹೆಚ್.ರಸ್ತೆಯ ರೋಟರಿ ಚಿತಾಗಾರದಲ್ಲಿ ನಡೆಯಲಿದೆ.
ಇದನ್ನೂ ಓದಿ: ಹಿಜಾಬ್ ಪ್ರಕರಣದ ವಿಚಾರಣೆ ಆರಂಭಿಸಿದ ಹೈಕೋರ್ಟ್ : ಸರ್ಕಾರದ ಪರ ಎಜಿ ವಾದ ಮಂಡನೆ
ಮೆರವಣಿಗೆಯಲ್ಲಿ ಡಿಸಿ, ಎಸ್ಪಿ ಸೇರಿದಂತೆ ಹಲವು ಅಧಿಕಾರಿಗಳಿದ್ದಾರೆ. ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಕೂಡ ಮೆರವಣಿಗೆಗೆ ಅವಕಾಶ ನೀಡಲಾಗಿದೆ.
ಐವರಿಗೆ ಗಾಯ: ಇದಕ್ಕೂ ಮುನ್ನ ಹರ್ಷನ ದೇಹವನ್ನು ಮನೆಗೆ ತೆಗೆದುಕೊಂಡು ಹೋಗುವಾಗಲೂ ಕಾರು ಹಾಗೂ ಬೈಕ್ಗಳಿಗೆ ಬೆಂಕಿ ಹಚ್ಚಲಾಗಿತ್ತು. ಮೆಗ್ಗಾನ್ ಆಸ್ಪತ್ರೆ ಶವಗಾರದಿಂದ ಸೀಗೆಹಟ್ಟಿಯ ಮನೆಗೆ ತೆಗೆದುಕೊಂಡ ಹೋಗುವಾಗ ಕ್ಲಾರ್ಕ್ ಪೇಟೆ ಮಾರ್ಗವಾಗಿ ತೆರಳುವಾಗ ಘಟನೆ ನಡೆದಿದೆ. ಘಟನೆಯಿಂದ ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸುದ್ದಿ ಸಂಸ್ಥೆಯೊಂದರ ಪೋಟೊಗ್ರಾಫರ್ ಸೇರಿದಂತೆ ಐವರ ತಲೆಗೆ ಗಾಯವಾಗಿದ್ದು, ಎಲ್ಲರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.