ಶಿವಮೊಗ್ಗ : ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ SDPI ಮತ್ತು PFI ಕಾರ್ಯಕರ್ತರನ್ನು ಇಂದು ಬೆಳಗಿನಜಾವ 3 ಗಂಟೆ ಸುಮಾರಿಗೆ ದಾಳಿ ನಡೆಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದರು.
ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಶಿವಮೊಗ್ಗದಲ್ಲಿ ನಾಲ್ವರು ಪಿಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರು. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಗಿಗುಡ್ಡ ಬಡಾವಣೆಯ ಮನ್ಸೂರ್, ಮಹಮ್ಮದ್ ರಫೀಕ್ ಹಾಗೂ ಶಿವಮೊಗ್ಗ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೈಯದ್ ಬಾಷಾ, ಅಬ್ದುಲ್ರನ್ನು ವಶಕ್ಕೆ ಪಡೆಯಲಾಗಿತ್ತು.
ವಶಕ್ಕೆ ಪಡೆದ ನಾಲ್ವರನ್ನು ಶಿವಮೊಗ್ಗ ತಾಲೂಕು ದಂಡಾಧಿಕಾರಿಗಳಾದ ತಹಶೀಲ್ದಾರ್ ಎನ್ಜೆ ನಾಗರಾಜ್ ಅವರ ಸಮ್ಮುಖದಲ್ಲಿ ಹಾಜರುಪಡಿಸಲಾಯಿತು. ಈ ವೇಳೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ಕರೆತಂದಿದ್ದ ಮನ್ಸೂರ್ ಹಾಗೂ ಮಹಮ್ಮದ್ ರಫೀಕ್ಗೆ ಅಕ್ಟೊಂಬರ್ 1 ರ ತನಕ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ. ಆದರೆ ತುಂಗಾನಗರ ಪೊಲೀಸರು ಕರೆತಂದಿದ್ದ ಇಬ್ಬರಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.
ಭದ್ರಾವತಿ ಪಟ್ಟಣದಲ್ಲಿ ಬಂಧಿತರಾದ ಹರ್ಷದ್ ವುಲ್ಲಾ ಖುರೇಷಿ, ತಾಹೀರ್ ಹಾಗೂ ಸಾದೀಕ್ರನ್ನು ಭದ್ರಾವತಿ ತಹಶೀಲ್ದಾರ್ ಪ್ರದೀಪ್ ನಿಕ್ಕಂ ರವರ ಮುಂದೆ ಹಾಜರು ಪಡಿಸಲಾಗಿದೆ. ಮೂವರನ್ನು ಸಹ ಅಕ್ಟೊಂಬರ್ 3 ರ ತನಕ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈ ವೇಳೆ ಬಂಧಿತರ ಪರವಾಗಿ ತಹಶೀಲ್ದಾರ್ ಅವರು ಬಾಂಡ್ ನೀಡಿ ಜಾಮೀನು ನೀಡುವುದಕ್ಕೆ ನಿರಾಕರಿಸಿದ್ದಕ್ಕೆ ವಕೀಲರು ಆಕ್ರೋಶ ವ್ಯಕ್ತಪಡಿಸಿದರು.
ಬಂಧಿತರಿಗೆ ತಹಶಿಲ್ದಾರ್ ಅವರು ತಮ್ಮಲ್ಲಿಯೇ ಬಾಂಡ್ ಪಡೆದು ಕಳುಹಿಸಬಹುದಾಗಿತ್ತು. ಆದರೆ ತಹಶೀಲ್ದಾರ್ ಇದನ್ನು ಮಾಡಲಿಲ್ಲ ಎಂದು ಬಂಧಿತರ ಪರ ವಕೀಲ ಶಹನಾಜ್ ಸಿದ್ದಿಕಿ ಆರೋಪಿಸಿದರು.
ಈ ಹಿಂದೆ ಪಿಎಫ್ಐ ರಾಜ್ಯ ವಲಯ ಅಧ್ಯಕ್ಷ ಶಾಹೀದ್ ಖಾನ್ ಎಂಬುವರ ಮನೆ ಮೇಲೆ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದರು. ನಗರದ ಯಲಕಪ್ಪನ ಬೀದಿಯಲ್ಲಿನ ಶಾಹಿದ್ ನಿವಾಸದ ಮೇಲೆ ಎನ್ಐಎ ದಾಳಿ ಮಾಡಿತ್ತು. ಮನೆ ಶೋಧ ಬಳಿಕ ಎನ್ಐಎ ಅಧಿಕಾರಿಗಳ ತಂಡ ಶಾಹಿದ್ ಖಾನ್ ವಶಕ್ಕೆ ಪಡೆದು ಕರೆದೊಯ್ದಿದ್ದರು. ಶಾಹಿದ್ ಖಾನ್ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಹಾವೇರಿ ಜಿಲ್ಲೆಯ ವಲಯ ಪಿಎಫ್ಐ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದರು.