ಶಿವಮೊಗ್ಗ: ಬೆಂಗಳೂರು ಅಭಿವೃದ್ಧಿಯಾದರೆ ರಾಜ್ಯವೇ ಅಭಿವೃದ್ಧಿಯಾದಂತೆ ಎಂಬ ಚಿಂತನೆ ರಾಜ್ಯ ಸರ್ಕಾರಕ್ಕೆ ಇದ್ದಂತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿಯಾದರೆ ಮಾತ್ರ ಇಡೀ ರಾಜ್ಯವೇ ಅಭಿವೃದ್ಧಿಯಾದಂತೆ ಎಂಬ ಚಿಂತನೆಯಲ್ಲಿದೆ. ಹಾಗಾಗಿ ಈ ಚಿಂತನೆ ಮೊದಲು ಬಿಡಬೇಕು ಎಂದರು.
ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಲು ಚರ್ಚೆಗಳು ಶುರುವಾಗಿದೆ. ಈ ವಿಚಾರದಲ್ಲಿ ಮಾಧ್ಯಮಗಳು ಸಮಾಜವನ್ನು ಜಾಗೃತಗೊಳಿಸುತ್ತಿವೆ. ಇದೊಂದು ಒಳ್ಳೆಯ ವಿಚಾರ ಎಂದರು. ಈ ಯೋಜನೆ ಅವೈಜ್ಞಾನಿಕವಾಗಿದ್ದು, ಇದಕ್ಕೆ ನನ್ನ ವಿರೋಧವಿದೆ. ವಿದ್ಯುತ್ ಯೋಜನೆಗಾಗಿ ಭೂಮಿ ಕೊಟ್ಟ ಲಿಂಗನಮಕ್ಕಿ ಸಂತ್ರಸ್ತರಿಗೆ 60 ವರ್ಷಗಳಾದರೂ,ಇನ್ನೂ ಪರಿಹಾರ ನೀಡಿಲ್ಲ ಎಂದರು.
ಇಂತಹ ಸಂದರ್ಭದಲ್ಲಿ ಮತ್ತೊಂದು ಯೋಜನೆ ಜಾರಿಗೊಳಿಸುವುದು ಸರಿಯಲ್ಲ. ಬೆಂಗಳೂರಿನಲ್ಲಿ ಲಭ್ಯವಿರುವ ನೀರಿನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು. ಶರಾವತಿ ನದಿಯಿಂದ ಬೆಂಗಳೂರಿಗೆ ನೀರನ್ನು ತೆಗೆದುಕೊಂಡು ಹೋಗುವ ನಿರ್ಧಾರ ಮೊದಲು ಕೈ ಬಿಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.