ಶಿವಮೊಗ್ಗ: ಹೊಸ ರೈಲು ಮಾರ್ಗ ನಿರ್ಮಾಣದ ಉದ್ದೇಶಕ್ಕಾಗಿ ಸ್ವಾಧೀನ ಪಡೆಸಿಕೊಳ್ಳುವ 1,427 ಎಕರೆ ಜಮೀನಿಗೆ ಮಾರುಕಟ್ಟೆ ದರದ ನಾಲ್ಕು ಪಟ್ಟು ಯೋಗ್ಯ ಬೆಲೆ ನೀಡದಿದ್ದರೆ ರೈತರು ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿದರು.
ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ, ಶಿಕಾರಿಪುರ ಹಾಗೂ ರಾಣೇಬೆನ್ನೂರುಗಳಲ್ಲಿ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ರೈತರಿಂದ ಸ್ವಾಧೀನ ಪಡೆಸಿಕೊಳ್ಳುವ 1,427 ಎಕರೆ ಜಮೀನಿಗೆ ರೈಲ್ವೆ ಇಲಾಖೆ ಜಮೀನಿನ ದರದ ನಾಲ್ಕು ಪಟ್ಟು ಹಣ ನೀಡಿದರೆ ಮಾತ್ರ ರೈತರು ಜಮೀನು ನೀಡುತ್ತಾರೆ. ಇಲ್ಲವಾದರೆ ರೈತರು ಯಾವುದೇ ಕಾರಣಕ್ಕೂ ಜಮೀನು ನೀಡುವುದಿಲ್ಲ ಎಂದರು.
ಓದಿ:'ನಮ್ಮೂರಿಗೆ ಅಕೇಶಿಯ ಬೇಡ' : ಶಿವಮೊಗ್ಗದಲ್ಲಿ ಪ್ರತಿಭಟನೆ.. ಪೊಲೀಸರೊಂದಿಗೆ ವಾಗ್ವಾದ
ರೈತರು ತಮ್ಮ ಜೀವನ ನಡೆಸಲು ಇರುವ ಭೂಮಿಯನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಸರ್ಕಾರ ರೈತರ ಬಳಿ ಸ್ವಾಧೀನಪಡಸಿಕೊಂಡಷ್ಟೇ ಭೂಮಿಯನ್ನು ಬೇರೆ ಕಡೆ ನೀಡಬೇಕು. ಇಲ್ಲವಾದರೆ, ಒಂದು ಎಕರೆ ಜಮೀನಿಗೆ 80 ಲಕ್ಷ ರೂ. ನೀಡಬೇಕು. ಜೊತೆಗೆ ಜಮೀನು ಸ್ವಾಧೀನ ಪಡೆಸಿಕೊಂಡ ಕುಟುಂಬದ ಸದಸ್ಯರೊಬ್ಬರಿಗೆ ಅವರ ವಿದ್ಯಾರ್ಹತೆ ನೋಡಿ, ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.