ಶಿವಮೊಗ್ಗ: ಇದೇ ಜನವರಿ 11, 12 ಮತ್ತು 13 ರಂದು ಬಿಜೆಪಿ ವತಿಯಿಂದ ಜನ ಸೇವಕ್ ಸಮಾವೇಶ ನಡೆಸುವ ತೀರ್ಮಾನವನ್ನು ನಗರದಲ್ಲಿ ನಡೆದ ಬಿಜೆಪಿಯ ವಿಶೇಷ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ಬಿಜೆಪಿಯ ರಾಜ್ಯ ವಿಶೇಷ ಸಭೆಯ ಮೊದಲ ಅವಧಿಯಲ್ಲಿ ನಡೆದ ಮಾಹಿತಿಯನ್ನು ಮಾಧ್ಯಮದವರಿಗೆ ತಿಳಿಸಿದ ಅವರು, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಒಟ್ಟು 6 ತಂಡಗಳನ್ನು ರಚನೆ ಮಾಡಲಾಗುವುದು. ಈ ತಂಡ ಪ್ರತಿದಿನ ಎರಡು ಜಿಲ್ಲೆಗಳಿಗೆ ಭೇಟಿ ನೀಡಿ ಸಮಾವೇಶ ನಡೆಸುತ್ತದೆ. ಸಮಾವೇಶದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಕಾರ್ಯಕರ್ತರಿಗೆ ಸನ್ಮಾನ ಸೇರಿದಂತೆ ಜಿ.ಪಂ., ತಾ.ಪಂ ಚುನಾವಣೆಯಲ್ಲಿ 2ನೇ ಹಂತದ ನಾಯಕರನ್ನು ಬೆಳೆಸಲು ಅನುಕೂಲವಾಗುವಂತಹ ಕಾರ್ಯತಂತ್ರ ರೂಪಿಸಲಾಗುತ್ತದೆ ಎಂದರು.
ಓದಿ: ಜೆಡಿಎಸ್ ಸೋಲಿಸಲಾಗದ ಬಿಜೆಪಿಯಿಂದ ಮೈತ್ರಿಯ ಕಪಟ ನಾಟಕ; ಎಚ್ಡಿಕೆ ಕಿಡಿ
ಮುಂದಿನ ದಿನಗಳಲ್ಲಿ ಯಾರದೇ ರಾಜಕೀಯ ಹಂಗಿಲ್ಲದೆ ಸರ್ಕಾರ ರಚನೆ ಮಾಡುವ ಕುರಿತು ಚರ್ಚೆ ನಡೆಸಲಾಗಿದ್ದು, ರಾಜಕೀಯವಾಗಿ ಸಂಘಟನಾತ್ಮಕವಾದ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ. ಬಿಜೆಪಿ ತಂದಿರುವ ರೈತಪರ ಕಾನೂನಿನ ಕುರಿತು ಎಡಪಂಥೀಯರು ರೈತರನ್ನು ಹಾದಿ ತಪ್ಪಿಸುತ್ತಿದ್ದಾರೆ. ಜನ ಸೇವಕ್ ಸಮಾವೇಶದಲ್ಲಿ ರೈತರಿಗೆ ಈ ಕುರಿತು ಅರಿವು ಮೂಡಿಸಲಾಗುವುದು ಎಂದರು.